ADVERTISEMENT

ನೇರಳೆ: ತಗ್ಗಿದ ಪೂರೈಕೆ, ಕುಗ್ಗದ ಬೇಡಿಕೆ

ಕೆ.ಎಸ್.ಸುನಿಲ್
Published 3 ಜುಲೈ 2017, 9:48 IST
Last Updated 3 ಜುಲೈ 2017, 9:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಔಷಧೀಯ ಗುಣವುಳ್ಳ ನೇರಳೆ ಹಣ್ಣಿನ ಸುಗ್ಗಿ ಮುಗಿಯುತ್ತಾ ಬಂದರೂ ಬೇಡಿಕೆ ಕುಗಿಲ್ಲ. ನಗರದ ಮಾರುಕಟ್ಟೆ ಹಾಗೂ ವಿವಿಧ ಬಡಾವಣೆಗಳಲ್ಲಿ ತಳ್ಳುವ ಗಾಡಿ, ರಸ್ತೆ ಬದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಕೆಲವು ಕಡೆ ಮಹಿಳೆಯರು ಬುಟ್ಟಿಯಲ್ಲಿ ಹೊತ್ತು ಮಾರಾಟ ಮಾಡುವ ದೃಶ್ಯ ಕಾಣಬಹುದು. ಕಳೆದ ತಿಂಗಳು ಅಪಾರ ಪ್ರಮಾಣ ದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ನೇರಳೆ  ಈಗಲೂ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ.

ಕೆ.ಜಿಗೆ ₹ 100 ರಿಂದ ₹ 150 ರವರೆಗೂ ದರ ನಿಗದಿಯಾಗಿದೆ. ಕೆಲವು ಕಡೆ ಪಾವುನಲ್ಲಿ ಅಳತೆ ಮಾಡಿ ₹ 20ಕ್ಕೆ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ನೇರಳೆ ಹಣ್ಣು ಹೆಚ್ಚಾಗಿ ಇಳುವರಿ ಬರುತ್ತದೆ. ಹೊರ ಜಿಲ್ಲೆಯಿಂದ ಹಣ್ಣು  ತರಿಸಲಾಗಿದೆ. ಜಿಲ್ಲೆಯಲ್ಲಿ ನೇರಳೆಯನ್ನು ಸಕಲೇಶಪುರ ಹಾಗೂ ಹಾಸನ ತಾಲ್ಲೂಕಿನ ಕೆಲವೆಡೆ ಮಾತ್ರ ಒಂದು ಬೆಳೆಯಾಗಿ ಬೆಳೆಯಲಾಗಿದೆ.

ಆಯುರ್ವೇದದಲ್ಲಿ ನೇರಳೆ ರಸಕ್ಕೆ ಒಳ್ಳೆಯ ಬೆಲೆ ಇದೆ. ಭೇದಿ ನಿಲ್ಲಿಸುವ ಔಷಧವಾಗಿಯೂ ಹೆಸರಾಗಿದೆ. ನೇರಳೆ ಹಣ್ಣಿನ ಶರಬತ್ತು ಅನ್ನು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹಣ್ಣಿನ ತಿರುಳನ್ನು ವೈನ್‌, ವಿನೆಗರ್‌, ಜೆಲ್ಲಿ, ಜಾಮ್‌ ತಯಾರಿಕೆಗೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೋಟಿನ್‌, ಕಾರ್ಬೊ ಹೈಡ್ರೇಟ್‌, ಕ್ಯಾಲ್ಸಿಯಂ ಅಂಶಗಳು ಇರುವುದರಿಂದ ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ADVERTISEMENT

‘ನೇರಳೆ ಹಣ್ಣು ಸಿಸನ್‌ ಮುಗಿಯುತ್ತಾ ಬಂದಿದೆ. ಹೆಚ್ಚು ಮಾಲು ಬರುತ್ತಿಲ್ಲ. ಒಂದು ಚೀಲ ತಂದರೂ ಸಂಜೆಯಷ್ಟರಲ್ಲಿ ಖಾಲಿ ಆಗಿರುತ್ತದೆ. ಆದರೆ ಹಣ್ಣುಗಳೇ ಸಿಗುತ್ತಿಲ್ಲ. ಸಕಲೇಶಪುರದಿಂದ ಬರುತ್ತಿದ್ದ ಮಾಲು ನಿಂತು ಹೋಗಿದೆ.  ಮರದಲ್ಲೂ ಹಣ್ಣುಗಳು ಖಾಲಿಯಾಗಿವೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮಂಜಮ್ಮ.

‘ನೇರಳೆ ಬಹು ವಾರ್ಷಿಕ ಬೆಳೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಎರಡು, ಮೂರು ಹಳ್ಳಿಗಳು ಸೇರಿ 50 ಎಕರೆ ಪ್ರದೇಶದಲ್ಲಿ ನೇರಳೆ ಬೆಳೆ ಬೆಳೆಯಲು ಮುಂದಾದರೆ ಸಹಾಯ ಧನ ನೀಡಲಾಗುವುದು. ಆಸಕ್ತರಿಗೆ ನೇರಳೆ ಸಸಿಗಳನ್ನು ತರಿಸಿಕೊಡಲಾಗುವುದು.

ಬೆಳೆ ಕೈ ಸೇರಲು 5 ರಿಂದ 7 ವರ್ಷ ಕಾಯಬೇಕು. ಮಾರ್ಚ್‌, ಏಪ್ರಿಲ್‌ನಲ್ಲಿ ಮರ ಹೂ ಬಿಡಲಾರಂಭಿಸುತ್ತದೆ. ಜೂನ್‌ ತಿಂಗಳ ಹೊತ್ತಿಗೆ ಹಣ್ಣಾಗುತ್ತವೆ. ಒಂದು ಮರದಲ್ಲಿ 1 ರಿಂದ 2 ಕ್ವಿಂಟಲ್‌ನಷ್ಟು ಹಣ್ಣಗಳು ಕೊಡುತ್ತವೆ’ ಎಂದು  ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ನೇರಳೆ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ. ಹಲವು ಕಾಯಿಲೆಗಳಿಗೆ ಇದನ್ನು ಬಳಸಲಿದ್ದು, ಜಿಲ್ಲೆಯಲ್ಲಿ ನೇರಳೆ ಬೆಳೆಯಲು ಉತ್ತೇಜನ ನೀಡಲಾಗುವುದು.
ಎ.ಮಂಜು
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.