ADVERTISEMENT

ನ್ಯಾಫೆಡ್‌ನಿಂದ ಕೊಬ್ಬರಿ ಖರೀದಿ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 26 ಜೂನ್ 2013, 5:57 IST
Last Updated 26 ಜೂನ್ 2013, 5:57 IST

ಚನ್ನರಾಯಪಟ್ಟಣ: ಇಲ್ಲಿನ ಎಪಿಎಂಸಿ ಆವರಣದಲ್ಲಿ ನ್ಯಾಫೆಡ್ ವತಿಯಿಂದ `ಕೊಬ್ಬರಿ ಖರೀದಿ'ಯನ್ನು ಪುನರ್ ಆರಂಭಿಸುವಂತೆ ಸೋಮವಾರ ಆರಂಭಗೊಂಡ ರೈತರ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು.

ಕೊಬ್ಬರಿ ಗುಣಮಟ್ಟ ಪರೀಕ್ಷಿಸುವ ಅಧಿಕಾರಿ ಗೈರು ಹಾಜರಾಗಿದ್ದರಿಂದ ಸೋಮವಾರ ರೈತರಿಂದ ಕೊಬ್ಬರಿ ಖರೀದಿಸಲಿಲ್ಲ. ಮಂಗಳವಾರವೂ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭವಾಗದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ರೈತರು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು.

ಅಷ್ಟರಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಪಿ.ಜಿ. ನಟರಾಜ್ ಆಗಮಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊಬ್ಬರಿ ಖರೀದಿಯನ್ನು ಸ್ಥಗಿತಗೊಳಿಸಿ ರೈತರಿಗೆ ತೊಂದರೆ ನೀಡುವುದು ತರವಲ್ಲ. ಖರೀದಿ ನಿಲ್ಲಿಸಲು ಕಾರಣ ಏನು? ಯಾವ ಅಧಿಕಾರಿ ಗೈರು ಹಾಜರಾಗಿದ್ದಾರೆ ಎಂಬ ಮಾಹಿತಿ  ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

ಕೊಬ್ಬರಿ ಖರೀದಿ ಆರಂಭ: ಕೊಬ್ಬರಿ ಗುಣಮಟ್ಟ ಪರೀಕ್ಷಿಸುವ ಅಧಿಕಾರಿ ಆಗಮಿಸಿದ ನಂತರ ಮಧ್ಯಾಹ್ನ 2ಕ್ಕೆ ಪೊಲೀಸರ ರಕ್ಷಣೆಯಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಲಾಯಿತು.

ಶೇ 7.2ರಷ್ಟು ತೇವಾಂಶವಿರುವ ಕೊಬ್ಬರಿಯನ್ನು ಮಾತ್ರ ಖರೀದಿಸಬೇಕೆಂಬ ನಿಯಮವಿದೆ. ಆದರೆ ಕಳೆದ  ಶುಕ್ರವಾರ  ಶೇ 22.5 ತೇವಾಂಶಇರುವ ಕೊಬ್ಬರಿ ಖರೀದಿಸುವಂತೆ ಕೆಲವರು `ಕೊಬ್ಬರಿ ಗುಣಮಟ್ಟ ಪರೀಕ್ಷಿಸುವ ಅಧಿಕಾರಿ' ಜಯಣ್ಣ ಅವರ ಮೇಲೆ ಒತ್ತಡ ಹೇರಿದ್ದರು. ಹಾಗಾಗಿ ಸೋಮವಾರ ಅಧಿಕಾರಿ ಗೈರು ಹಾಜರಾಗಿದ್ದರು.

ಮಂಗಳವಾರ ಶಿವು ಎಂಬುವರು ಗುಣಮಟ್ಟ ಪರೀಕ್ಷಿಸುವ ಅಧಿಕಾರಿಯಾಗಿ ನೂತನ ವಾಗಿ ನೇಮಕವಾಗಿದ್ದಾರೆ ಎಂದು ತೋಟಗಾರಿಕಾ ಇಲಾಖಾಧಿಕಾರಿ ನಂಜೇಗೌಡ ತಿಳಿಸಿದರು.

ನಂತರ ಶಾಸಕ ಸಿ.ಎನ್. ಬಾಲಕೃಷ್ಣ ಆಗಮಿಸಿ ಪರಿಶೀಲಿಸಿದರು. ಎಪಿಎಂಸಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪುಟ್ಟಸ್ವಾಮಿಗೌಡ, ಜಿ.ಪಂ.ಸದಸ್ಯ ಎನ್.ಡಿ. ಕಿಶೋರ್, ಎಚ್‌ಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಎಚ್.ಎಸ್. ಶ್ರೀಕಂಠಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.