ಮೂಡಿಗೆರೆ: ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಸಾಗಿಸುವ ಪೈಪ್‌ಲೈನ್‌ಗೇ ರಂದ್ರ ಕೊರೆದು ಪೆಟ್ರೋಲ್ ಕಳವು ಮಾಡುತ್ತಿದ್ದ ಬೃಹತ್ ಜಾಲವನ್ನು ಬಯಲಿಗೆಳೆದಿರುವ ಪಟ್ಟಣದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎಂಆರ್‌ಪಿಎಲ್ ಸಿಬ್ಬಂದಿ ಪ್ರಕಾಶ್ ಸೇರಿದಂತೆ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದಲ್ಲಿ ನಾಗೇಶ್, ರಮೇಶ್, ಮದನ್ ಕುಮಾರ್ ಎಂಬವರನ್ನು ಬಂಧಿಸಲಾಗಿದ್ದು, ಪ್ರಕರಣ ಮುಖ್ಯ ಆರೋಪಿ ಅರೇಹಳ್ಳಿಯ ರಾಜುಶೆಟ್ಟಿ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಇದೇ ವೇಳೆ, ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ ಗೋಣಿಬೀಡು ಎಸ್‌ಐ ಸುನೀಲ್ ಕುಮಾರ್ ಎಂಬವರನ್ನು ಪೊಲೀಸ್ ಇಲಾಖೆ ಗುರುವಾರವೇ ಅಮಾನತುಗೊಳಿಸಿದೆ.ಪೊಲೀಸರೂ ಭಾಗಿ-ಶಂಕೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಕೆಲವು ಪೊಲೀಸ್ ಅಧಿಕಾರಿಗಳು ಪೆಟ್ರೋಲ್ ಕಳವು ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆಯೂ ಇದೀಗ ತನಿಖೆ ನಡೆಯುತ್ತಿದೆ.
ಮೂಡಿಗೆರೆ ತಾಲ್ಲೂಕಿನ ಹುರುಡಿ ಬಳಿಯ ಅರಣ್ಯದಲ್ಲಿ ಎಂಆರ್‌ಪಿಎಲ್ ಪೈಪ್‌ಲೈನ್ ಹಾದು ಹೊಗಿದೆ. ಈ ಪೈಪ್‌ಲೈನ್‌ಗೆ ಚಿಕ್ಕ ರಂಧ್ರ ಮಾಡಿ ಹೊಸ ಪೈಪ್ ಜೋಡಿಸಿ, 3 ಕಿಮೀ ದೂರದಲ್ಲಿದ್ದ ಆರೋಪಿಯೊಬ್ಬರ ಮನೆಗೆ ಹಾಯಿಸಲಾಗುತ್ತಿತ್ತು. ನಂತರ ಅಲ್ಲಿಂದ ಟ್ಯಾಂಕರ್‌ಗೆ ವರ್ಗಾಯಿಸಿ ಮಾರಲಾಗುತ್ತಿತ್ತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಹಿಂದೆ ಗೌಡಹಳ್ಳಿ ಗ್ರಾಮದ ಬಳಿ ಇದೇ ರೀತಿ ಪೆಟ್ರೋಲ್ ಕದ್ದಿಯುತ್ತಿದ್ದ ಆರೋಪಿಗಳನ್ನು ಸುಲಭವಾಗಿ ಬಂಧಿಸುವ ಸಾಧ್ಯತೆ ಇದ್ದರೂ ಪೊಲೀಸರು ಕ್ರಮ ವಹಿಸಲಿಲ್ಲ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಹಿನ್ನೆಲೆ: ಸಕಲೇಶಪುರ-ಮೂಡಿಗೆರೆ ತಾಲ್ಲೂಕಿನ ಸರಹದ್ದಿನಲ್ಲಿರುವ ಹೆಗ್ಗರವಳ್ಳಿ, ಹಿರೇಶಿಗರ, ಹುರುಡಿ ಮುಂತಾದ ಗ್ರಾಮಗಳ ಸಮೀಪ ಎರಡು ತಿಂಗಳಿನಿಂದ ಪೆಟ್ರೋಲ್ ಕಳವು ದಂಧೆ ಅವ್ಯಾಹತವಾಗಿ ಸಾಗಿತ್ತು. ಪರಿಣಾಮ ಎಂಆರ್‌ಪಿಎಲ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಈ ಕುರಿತು ಗ್ರಾಮಸ್ಥರು ಗೋಣಿಬೀಡು ಪೊಲೀಸ್ ಠಾಣೆಯ ಅಧಿಕಾರಿ ಗಮನ ಸೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ. ದೂರು ನೀಡಿದವರನ್ನೇ ಆ ಅಧಿಕಾರಿ ಅನುಮಾನದಿಂದ ನೋಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಎಸ್‌ಐ ಅಮಾನತು: ಎಂಆರ್‌ಪಿಎಲ್ ಅಧಿಕಾರಿಗಳು ಫೆ.24ರಂದು ಸ್ವತಃ ನೀಡಿದ್ದ ದೂರನ್ನು ಸ್ವೀಕರಿಸಲೂ ಗೋಣಿಬೀಡು ಎಸ್‌ಐ ಸುನಿಲ್ ಕುಮಾರ್ ಮೀನಾ-ಮೇಷ ಎಣಿಸಿದ್ದರು.ಎಂಆರ್‌ಪಿಎಲ್ ಅಧಿಕಾರಿಗಳು ಅಂತಿಮವಾಗಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರು. ಡಿವೈಎಸ್‌ಪಿ ವೇದಮೂರ್ತಿ ವಿಚಾರಣೆ ನಡೆಸಿ ನೀಡಿದ ವರದಿ ಆಧರಿಸಿ ಠಾಣಾಧಿಕಾರಿ ಸುನೀಲ್ ಕುಮಾರ್ ವಿರುದ್ಧ ಅವರನ್ನು ಗುರುವಾರ ಅಮಾನತು ಮಾಡಲಾಯಿತು.ಪ್ರಸ್ತುತ ಪ್ರಕರಣದ ಬಗ್ಗೆ ಎಂಆರ್‌ಪಿಎಲ್ ಸ್ವತಂತ್ರ ತನಿಖೆ ನಡೆಸುತ್ತಿದೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.