ADVERTISEMENT

ಪ್ರವಾಸಿ ತಾಣಗಳ ಅಭಿವೃದ್ಧಿಗೆ ನಿರ್ಧಾರ: ಡಿಸಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 8:35 IST
Last Updated 13 ಜುಲೈ 2012, 8:35 IST

ಹಾಸನ: `ವಿಶ್ವ ವಿಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಸೇರಿದಂತೆ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ಮತ್ತು ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದ್ದು, ಹಂತ ಹಂತವಾಗಿ ಇವುಗಳನ್ನು ಅನು ಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪ್ರವಾ ಸೋದ್ಯಮ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಸಹಕಾರ ಮತ್ತು ಶ್ರಮ ಅಗತ್ಯ~ ಎಂದು ಜಿಲ್ಲಾಧಿಕಾರಿ ಮೋಹನ್ ರಾಜ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಬೆಂಗಳೂರು ಮತ್ತು ಮೈಸೂರು ಹೊರತು ಪಡಿಸಿದರೆ ಹಾಸನ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಿಲ್ಲೆ. ಇದರ ಪೂರ್ತಿ ಲಾಭ ಪಡೆಯುವ ನಿಟ್ಟಿನಲ್ಲಿ ನಾವು ಇನ್ನೂ ಪ್ರಯತ್ನ ಮಾಡಬೇಕು. ಮುಂದಿನ ದಿನಗಳಲ್ಲಿ ಎಲ್ಲ ನ್ಯೂನತೆಗಳನ್ನು ಸರಿಪಡಿಸಿ ಹಾಸನವನ್ನು ಅತ್ಯುತ್ತಮ ಪ್ರವಾಸಿ ಜಿಲ್ಲೆಯನ್ನಾಗಿ  ಪರಿವರ್ತಿಸುವುದು ತಮ್ಮ ಆಶಯ ಎಂದರು.

ಆರಂಭಿಕ ಹಂತದಲ್ಲಿ ಬೇಲೂರು, ಹಳೇಬೀಡುಗಳಿಗೆ ಬರುವ ಪ್ರವಾಸಿಗರಿಗೆ ಜಿಲ್ಲೆಯ ಇತರ ಸ್ಥಳಗಳ ಇತಿಹಾಸವನ್ನು ಪರಿಚಯಿಸುವ ಪ್ರಯತ್ನವನ್ನು ಮಾಡ ಲಾಗುವುದು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಮೋಹನ್ ರಾಜ್ ತಿಳಿಸಿದರು.

ಸಭೆಗೆ ರಂಗಾಯಣದ ನಿರ್ದೇಶಕ ರಾಜಾರಾಂ ಹಾಗೂ ಆಡಳಿತಾಧಿಕಾರಿ ನಿರ್ಮಲಾ ಮಠಪತಿ ಮತ್ತು ಸಾಫ್ಟ್ ವೇರ್ ತಜ್ಞ ಸಂಜಯ್ ಅವರನ್ನು ಆಹ್ವಾನಿಸಲಾಗಿತ್ತು. ಜಿಲ್ಲೆಯ ಪ್ರವಾಸಿ ಆಕರ್ಷಣೆಗಳ ಅಭಿವೃದ್ಧಿಗಾಗಿ ಮತ್ತು ಮಾಹಿತಿ ಪೂರೈಕೆ ವ್ಯವಸ್ಥೆಯ ಪ್ರಗತಿಗೆ ಇರುವ ವಿಪುಲ ಅವಕಾಶಗಳ ಕುರಿತು ಅವರೊಡನೆ ಚರ್ಚಿಸಲಾಯಿತು.
 

ಹಳೇಬೀಡಿನಲ್ಲಿ ಶಾಶ್ವತವಾಗಿ ಧ್ವನಿ ಬೆಳಕು ಪ್ರದರ್ಶನಕ್ಕೆ ಇರುವ ಸಾಧ್ಯತೆಗಳನ್ನು ಪರಿಶೀಲಿಸಿ ಸರ್ವಸಮ್ಮತ ಇತಿಹಾಸ ಮತ್ತು ಸ್ಥಳ ಮಹಿಮೆಯನ್ನು ಪ್ರವಾಸಿಗರಿಗೆ ಕಟ್ಟಿಕೊಡುವ ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಂಗಾಯಣ ನಿರ್ದೇಶಕರು, ಸಾಫ್ಟ್‌ವೇರ್ ತಂತ್ರಜ್ಞರು ಹಾಗೂ ಪ್ರವಾಸೋದ್ಯಮ ಮತ್ತು ಕಂದಾಯ ಇಲಾಖಾ ಅಧಿಕಾರಿಗಳನ್ನು ವಿನಂತಿಸಲಾಯಿತು.
ಜಿಲ್ಲೆಯ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಯ ಮೇಲ್ವಿಚಾರಣೆಯ ನೋಡಲ್ ಅಧಿಕಾರಿಯನ್ನಾಗಿ ಸಕಲೇಶಪುರ ಉಪವಿಭಾ ಗಾಧಿಕಾರಿ ಪಲ್ಲವಿ ಅಕುರಾತಿ ಅವರನ್ನು ನೇಮಿಸುವುದಾಗಿಯೂ ಅವರು ಪ್ರಕಟಿಸಿದರು.

ಬೇಲೂರು, ಹಳೇಬೀಡುಗಳಲ್ಲಿ ಸಮಗ್ರ ವಿವರ, ಮಾರ್ಗದರ್ಶನ ಒದಗಿಸಲು ವಿವಿಧ ಭಾಷೆಗಳ ಪ್ರವಾಸಿ ಮಾರ್ಗದರ್ಶನ ಕಿಟ್ ಸಿದ್ಧಪಡಿಸುವ ಚಿಂತನೆ ನಡೆಸಲಾಗಿದೆ. ಕುಳಿತಲ್ಲೇ ಆಸಕ್ತರಿಗೆ ಕಂಪ್ಯೂಟರ್ ಮೂಲಕ  ಈ ದೇವಾಲಯಗಳ ದೃಶ್ಯ ಚಿತ್ರ ದರ್ಶನ ಮಾಡಿಸಲು  ಸಾಫ್ಟ್‌ವೇರ್ ಸಿದ್ಧಪಡಿಸುವ ಪ್ರಯತ್ನ ವನ್ನು ಮಾಡಬಹುದು.

ಇದೆಲ್ಲವನ್ನೂ ಒಂದೇ ಯೋಜನೆಯಡಿ ಸೇರಿಸಿ ಮಂಜೂರಾತಿ ಪಡೆದು ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಿ ಅನುಷ್ಠಾನಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಶೀಘ್ರವೇ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ         ಸೂಚಿಸಿದರು.

ಪರಿಸರ ಪ್ರವಾಸೋದ್ಯಮ ಹಾಗೂ ಸಾಹಸ ಕ್ರೀಡೆಗಳಿಗೂ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶವಿದೆ. ಯಗಚಿ ಜಲಾಶಯದ ಹಿನ್ನೀರಿನಲ್ಲೇ ಜಲ ಸಾಹಸ ಕ್ರೀಡೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಇದನ್ನು ಇನ್ನಷ್ಟು ವ್ಯವಸ್ಥಿತಗೊಳಿಸಿ ಜನಾಕರ್ಷಣೆ ಕೇಂದ್ರವನ್ನಾಗಿ ಮಾಡಬೇಕು ಎಂದರು.

ಬೇಲೂರು, ಹಳೇಬೀಡು, ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕೈಗೆಟಕುವ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು, ಸ್ವಚ್ಛತೆ ಬಗ್ಗೆಯೂ ಗಮನ ಹರಿಸಬೇಕಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಪಲ್ಲವಿ ಅಕುರಾತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗೋಪಾಲಕೃಷ್ಣ, ಬೇಲೂರು ತಹಶೀಲ್ದಾರ ಚಿದಾನಂದ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಚಂದ್ರಶೇಖರ್, ನೀರಾವರಿ ಇಲಾಖೆ, ಪುರಾತತ್ವ ಇಲಾಖೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT