ADVERTISEMENT

ಫಲಕ ಖರೀದಿಯಲ್ಲಿ ಅವ್ಯವಹಾರ?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 6:30 IST
Last Updated 22 ಫೆಬ್ರುವರಿ 2011, 6:30 IST

ಸಕಲೇಶಪುರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಳಿಗೆ ಹಾಕುವಂತಹ ನಾಮಫಲಕಗಳ ಖರೀದಿಯಲ್ಲಿ ಭಾರೀ ಪ್ರಮಾಣದ ಹಣ ದುರುಪಯೋಗ ನಡೆದ ಶಂಕೆ ಉಂಟಾಗಿದೆ.ಗ್ರಾ.ಪಂ.ಗಳಿಗೆ ಸರಬರಾಜು ಮಾಡಲಾಗಿರುವ 260ಕ್ಕೂ ಹೆಚ್ಚು  ನಾಮಫಲಕಗಳನ್ನು ಹೊನ್ನಾವರದ ಗಣಪತಿ ಪ್ಲಕ್ಸ್ ಅಂಡ್ ಪ್ರಿಟಿಂಗ್ಸ್ ನವರಿಂದ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾಡಿಸಿ ್ದದಾರೆ ಎನ್ನಲಾಗಿದೆ.

ತಾಲ್ಲೂಕಿನ ಎಲ್ಲಾ ಗ್ರಾ.ಪಂ. ಗಳಿಗೆ ಸರಾಸರಿ 10 ನಾಮಫಲಕಗಳನ್ನು ಈಗಾಗಲೆ ಸರಬರಾಜು ಮಾಡಲಾಗಿದೆ.ಗುಣಮಟ್ಟವಿಲ್ಲದ ತೀರಾ ತೆಳುವಾದ ತಗಡಿನ ಮೇಲೆ ಪ್ಲಕ್ಸ್ ಪ್ರಿಂಟ್ ಅಂಟಿಸಿ ಅದಕ್ಕೊಂದು ಉರುಗೋಲು ಹಾಕಲಾಗಿದೆ. 2್ಡ3 ಅಡಿ ಅಂದರೆ 6 ಅಡಿ ಅಗಲದ ಪ್ಲಕ್ಸ್ ಪ್ರಿಂಟ್‌ಗೆ ಮಾರುಕಟ್ಟೆ ದರದಲ್ಲಿ ಒಂದು ಅಡಿಗೆ 12 ರೂಪಾಯಿಯಂತೆ, 6 ಅಡಿಗೆ 72 ರೂಪಾಯಿ, ತಗಡಿಗೆ 100, ಪ್ರೇಮ್ ಮತ್ತು ಉರುಗೋಲಿಗೆ 100, ಲೇಬರ್ ಚಾರ್ಜ್ 50 ರೂಪಾಯಿ ಲೆಕ್ಕ ಹಾಕಿದರೂ ಒಂದು ನಾಮ ಫಲಕದ ಸ್ಥಳೀಯ ಬೆಲೆ 322 ರೂಪಾಯಿ ಮೀರುವುದಿಲ್ಲ. 260 ನಾಮ ಫಲಕಗಳನ್ನು ಒಟ್ಟಿಗೆ ಗುತ್ತಿಗೆ ನೀಡಿದರೆ ಸಕಲೇಶ ಪುರ ಹಾಗೂ ಹಾಸನದಲ್ಲಿಯೇ ಇನ್ನೂ ಕಡಿಮೆ ಬೆಲೆಗೆ ಇವುಗಳನ್ನು ಮಾಡಲು ಸಾಕಷ್ಟು ಮಂದಿ ಇದ್ದಾರೆ.

ಮೇಲಿನ ನಾಮಫಲಕ ಒಂದಕ್ಕೆ ನೂರಾರು ಕಿ.ಮೀ. ದೂರದಲ್ಲಿ ಇರುವ ಹೊನ್ನಾವರದ ಗಣಪತಿ ಪ್ಲಕ್ಸ್ ಅಂಡ್ ಪ್ರಿಂಟಿಂಗ್ ನವರಿಗೆ ನೀಡಿರುವ ಬೆಲೆ ಎಷ್ಟು ಗೊತ್ತೇ..? 1050 ರೂಪಾಯಿ. ಪ್ರತಿ  ಗ್ರಾ.ಪಂ.ಗಳಿಂದ 10 ನಾಮಫಲಕಕ್ಕೆ 10500 ರೂಪಾಯಿ ಹಣ ನೀಡುವಂತೆ 26 ಗ್ರಾ.ಪಂ.ಗಳ ಕಾರ್ಯದರ್ಶಿ ಹಾಗೂ ಪಿ ಡಿ ಓ ಗಳಿಗೆ ತಾ.ಪಂ. ಅಧಿಕಾರಿಯೊಬ್ಬರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೇ ಬಾರದಂತೆ ಎಲ್ಲಾ ಗ್ರಾ.ಪಂ. ಕಾರ್ಯಾ ಲಯಗಳಿಗೆ ಸದರಿ ಪ್ರಿಂಟಿಗ್‌ನವರು ಲಾರಿ ಯೊಂದರಲ್ಲಿ ನಾಮಫಲಕಗಳನ್ನು ಸರಬರಾಜು ಮಾಡಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ಗೊತ್ತಿರದ ಹಲವು ಪಂಚಾಯ್ತಿಗಳ ಅಧ್ಯಕ್ಷರಿಗೆ, ಕಾರ್ಯದರ್ಶಿಗಳು ಹಾಗೂ ಪಿಡಿಓಗಳು ಸರ್ಕಾ ರದಿಂದ ಬಂದಿರುವ ಈ ನಾಮಫಲಕಗಳಿಗೆ ಎಂಜಿಎನ್‌ಆರ್‌ಜಿಎಸ್ ನಿಂದ ಹಣ ನೀಡಬೇಕು ಎಂದು ಹೇಳಿ, ಚೆಕ್‌ಗೆ ಸಹಿ ಮಾಡಿಸಿಕೊಂಡು ಹಣ ಪಾವತಿ ಸಹ ಮಾಡಲಾಗಿದೆ.

ಕ್ಯಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ಟಿ.ಪಿ.ಹಿತೇಂದ್ರ ಮಾತ್ರ ಈ ನಾಮಫಲಕಗಳನ್ನು ಸರಬರಾಜು ಮಾಡಿರುವ ಗುತ್ತಿಗೆದಾರರಿಗೆ ಹಣ ನೀಡದೆ ನಿರಾಕರಿಸಿದ್ದಾರೆ. ‘250 ರಿಂದ 300 ರೂಪಾಯಿ ನೀಡಿದರೆ ಸ್ಥಳೀಯವಾಗಿಯೇ ಎಷ್ಟು ಬೇಕಾದರೂ ಇಂತಹ ಕಳಫೆ ನಾಮಫಲಕ ದೊರೆಯುತ್ತವೆ. ನಮ್ಮಗಳ ಗಮನಕ್ಕೇ ಬರದಂತೆ ತಾ.ಪಂ. ಅಧಿಕಾರಿಗಳು ಕಳಿಸಿದ್ದಾರೆ ಎಂದು ಸುಮಾರು 15 ನಾಮಫಲಕಗಳನ್ನು ತಂದು ಕಚೇರಿಯಲ್ಲಿ ಇಟ್ಟು ಹೋಗಿದ್ದಾರೆ. ಇವುಗಳಿಗೆ 15750 ರೂಪಾಯಿ ನೀಡುವಂತೆ ಅಧಿಕಾರಿಗಳು ಸೂಚಿಸಿದರೆ ಹಣ ನೀಡುವುದಕ್ಕೆ ನಾವೇನು ಕುರಿಗಳಲ್ಲ.  ಎಂದು ‘ಪ್ರಜಾವಾಣಿ’ಗೆ ಹೇಳುತ್ತಾರೆ.

ಗ್ರಾ.ಪಂ. ಆಡಳಿತ ಸ್ಥಳೀಯ ಸರ್ಕಾರ ಇದ್ದಂತೆ, ಪಂಚಾಯ್ತಿಯಿಂದ ಯಾವುದೇ ಯೋಜನೆಗಳನ್ನು ಕೈಗೊಳ್ಳಲು, ಯಾವುದೇ ಪರಿಕರಗಳನ್ನು ಖರೀದಿ ಮಾಡಲು ಪಂಚಾಯ್ತಿ ಆಡಳಿತಕ್ಕೆ ಪೂರ್ಣ ಅಧಿಕಾರ ಇದೆ.  ಯೋಜನೆ ಕೈಗೊಳ್ಳುವಾಗ ಅಥವಾ ಯಾವುದೇ ಪರಿಕರಗಳನ್ನು ಖರೀದಿ ಮಾಡುವಾಗ ಕಾನೂನು ಉಲ್ಲಂಘನೆ ಅಥವಾ ಹೆಚ್ಚಿನ ಬೆಲೆ ನೀಡುತ್ತಿದ್ದರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಮನ ಹರಿಸಬೇಕು. ಮತ್ತು ದೋಷ ಕಂಡುಬಂದರೆ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ನೀಡಬೇಕು ಎಂದು ಗ್ರಾ.ಪಂ. ಸದಸ್ಯರ ತರಬೇತಿ ಶಿಬಿರಗಳಲ್ಲಿ ಇದೇ ಅಧಿಕಾರಿಗಳು ಹೇಳುತ್ತಾರೆ.

ಆದರೆ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಂತ ಅತ್ಯುತ್ತಮ ಯೋಜನೆಯ ಹಣ ದುರುಪಯೋಗಕ್ಕೆ ಅಧಿಕಾರಿಗಳೇ ಮುಂದಾಗುವ ಮೂಲಕ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಆಗಿದೆ. ಗ್ರಾ.ಪಂ.ಗಳಿಗೆ ಸರಬರಾಜು ಮಾಡಿರುವ ನಾಮಫಲಕಗಳು ಹಾಗೂ ಅವುಗಳಿಗೆ ನೀಡಿರುವ ದುಪ್ಪಟ್ಟು ಹಣದ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಇಓ ಹೇಳಿದ್ದು: ‘ಎಂಜಿಎನ್‌ಆರ್‌ಜಿಎಸ್ ಪ್ರತಿಯೊಂದು ಕಾಮಗಾರಿಗಳು ಆರಂಭಗೊಳ್ಳುವ ಮೊದಲೇ ನಾಮಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ಗ್ರಾ.ಪಂ.ಗಳಿಗೆ ಸೂಚನೆ ನೀಡಿದ್ದೇನೆ. ಹೊನ್ನಾವರದ ಗಣಪತಿ ಪ್ಲಕ್‌ನವರು ಬೇರೆ ಜಿಲ್ಲೆಗಳಿಗೂ ನಾಮಫಲಕಗಳನ್ನು ಸರಬರಾಜು ಮಾಡಿರುವುದರಿಂದಾಗಿ, ಅವರಿಂದ ಮಾಡಿಸ ಬಹುದು ಎಂದು ಹೇಳಿದ್ದೆ ಅಷ್ಟೆ’. ಪ್ರತಿ ನಾಮಫಲಕ ಹಾಗೂ ಅವುಗಳನ್ನು ಸಾಗಿಸುವ ಎಲ್ಲಾ ವೆಚ್ಚ ಸೇರಿ 1050 ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ. ಬೆಲೆ ಹೆಚ್ಚಾಗಿದೆ ಎಂದರೆ  ಗ್ರಾ.ಪಂ. ಆಡಳಿತ ಯಾವುದೇ ಗುತ್ತಿಗೆದಾರರಿಂದ ಬೇಕಾ ದರೂ ಖರೀದಿ ಮಾಡಬಹು. ನಾಮಫಲಕ ಖರೀದಿ ಯಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ತಾ.ಪಂ. ಸಿಇಓ ಸಿದ್ದರಾಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.