ADVERTISEMENT

ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ: ಜಯಣ್ಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 4:37 IST
Last Updated 8 ಏಪ್ರಿಲ್ 2013, 4:37 IST

ಅರಸೀಕೆರೆ: ಕಾಂಗ್ರೆಸ್ ಪಕ್ಷದಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ, ಪಕ್ಷದ ರಾಜ್ಯ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಜೆ.ಪಿ.ಎನ್ ಜಯಣ್ಣ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಭಾನುವಾರ ತಿಳಿಸಿದರು.

ಪಟ್ಟಣದ ಹೊರಭಾಗದ ಫಾರಂ ಹೌಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರು ಹಾಗೂ ವರಿಷ್ಠರು ಕ್ಷೇತ್ರದ ಟಿಕೆಟ್ ನೀಡುವಾಗ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಹಿಂದುಳಿದ ವರ್ಗ ಹಾಗೂ ವೀರಶೈವ ಜನಾಂಗವನ್ನು ಕಡೆಗಣಿಸಿದ್ದಾರೆ. ಹೊರಗಿನವರಿಗೆ ಮಣೆ ಹಾಕಿದ್ದಾರೆ ಎಂದು ಆರೋಪಿಸಿದರು.

ಜಾತಿ ಆಧಾರದ ಮೇಲೆ ಟಿಕೆಟ್ ಹಂಚಲಾಗಿದೆ. ಒಕ್ಕಲಿಗ ಅಭ್ಯರ್ಥಿಗಳನ್ನು ಗೆಲ್ಲಿಸಿ `ಬಣ' ರಾಜಕಾರಣಕ್ಕೆ ಡಿ.ಕೆ. ಶಿವಕುಮಾರ್ ಕುತಂತ್ರ ನಡೆಸಿದ್ದಾರೆ. ಇವರ ಜಾತಿ ತಂತ್ರ ವಿಫಲಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಹಣಕ್ಕೆ ಟಿಕೆಟ್ ಮಾರಾಟವಾಗಿದೆ. ವಿವಿಧ ತಂಡಗಳು ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ನಡೆಸಿ ಸಲ್ಲಿಸಿದ ವರದಿ ಯಲ್ಲಿ ನನ್ನ ಹೆಸರಿತ್ತು. ಅಲ್ಲದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಭರವಸೆ ನೀಡಿದ್ದರು. ಕೊನೆಯ ಗಳಿಗೆಯಲ್ಲಿ ನನ್ನ ಹೆಸರು ತಳ್ಳಿ ಶಿವರಾಂಗೆ ಟಿಕೆಟ್ ನೀಡಲಾಗಿದೆ ಎಂದು ದೂರಿದರು.

ಕೋಮಾ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಜೆಡಿಎಸ್‌ಗೆ ಸಮ ಬಲವಾಗಿ ಕಟ್ಟಿದ್ದಕ್ಕೆ ಪಕ್ಷ ಸರಿಯಾದ ಬಹುಮಾನ ನೀಡಿದೆ ಎಂದರು.
ಕೆಂಪೇಗೌಡ ವೇದಿಕೆ ಅಧ್ಯಕ್ಷ, ಹಿಂದುಳಿದ ವರ್ಗದ ಮುಖಂಡ ಶಿವಾನಾಯ್ಕ ಮಾತನಾಡಿದರು. ದಲಿತ ಮುಖಂಡ ಕೆ.ಆನಂದ, ಪುರಸಭಾ ಸದಸ್ಯ ಬಾಲ ಮುರುಗನ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹರೀಶ್ ಬಾಬು, ವೀರಶೈವ ಸಮಾಜದ ಮುಖಂಡ ಎಸ್. ಹರೀಶ್, ಕ್ಯಾತನಹಳ್ಳಿ ಪ್ರಸನ್ನ, ಗೀಜೀಹಳ್ಳಿ ಪ್ರಸನ್ನಕುಮಾರ್, ಅಲ್ಪ ಸಂಖ್ಯಾತ ಮೋರ್ಚಾ ಮುಖಂಡ ಸಿರಾಜುದ್ದೀನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.