ADVERTISEMENT

ಬಡಾವಣೆಗಳ ಮರು ನಾಮಕರಣ ಪ್ರಸ್ತಾವ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 4:30 IST
Last Updated 20 ಏಪ್ರಿಲ್ 2012, 4:30 IST

ಬೇಲೂರು: ಪುರಸಭೆ ವ್ಯಾಪ್ತಿಯ ವಿವಿಧ ಬೀದಿ ಮತ್ತು ಬಡಾವಣೆಗಳಿಗೆ ಹೊಸ ಹೆಸರು ನಾಮಕಾರಣ ಮಾಡಲು ಮುಂದಾದರೆ ವಿವಾದ ಉದ್ಭವಿಸುವ ಸಂಭವ ಇರುವುದರಿಂದ ಹೊಸ ಹೆಸರು ಇಡುವ ಪ್ರಸ್ತಾವ ಕೈಬಿಡಲು ಗುರು ವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು.

ಪುರಸಭೆ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಬೀದಿಗಳಿಗೆ ಹೆಸರಿಡುವ ಸಂಬಂಧ ಸಾರ್ವಜನಿಕರಿಂದ ಅರ್ಜಿಗಳು ಬಂದಿವೆ. ಈ ಕುರಿತು ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳ ಬೇಕೆಂದು ಕೋರಿದರು. ಸದಸ್ಯ ಮಾತನಾಡಿ, ಬಿ.ಎನ್. ಚಂದ್ರಶೇಖರ್, ಎಚ್.ಎಂ. ದಯಾನಂದ್ ಮತ್ತು ಬಿ.ಎ. ಜಮಾಲುದ್ದೀನ್ ಬೀದಿಗಳ ಹೆಸರು ಮರು ನಾಮಕರಣ ಮಾಡಲು ಮುಂದಾದರೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಈ ಪ್ರಸ್ತಾವ ಕೈಬಿಡುವುದು ಸೂಕ್ತ ಎಂದು ಸಲಹೆ ಮಾಡಿದರು.

ಇದೇ ಸಂದರ್ಭದಲ್ಲಿ ಪುರಸಭೆ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣಕ್ಕೆ `ಹೊಯ್ಸಳ ಕಾಂಪ್ಲೆಕ್ಸ್~ ಎಂದು ಮತ್ತು ಜೆ.ಪಿ. ನಗರ ವೃತ್ತಕ್ಕೆ `ಜಯಪ್ರಕಾಶ್ ನಾರಾಯಣ್~ ಅವರ ಹೆಸರಿಡಲು ಸಭೆ ತೀರ್ಮಾನಿಸಿತು.

ಒಳಚರಂಡಿ ಸ್ವಚ್ಛಗೊಳಿಸುವ ಪುರಸಭೆ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಮ್ಯಾನ್‌ಹೋಲ್ ಸ್ವಚ್ಛತೆಗೂ ಕಳುಹಿಸುವಂತೆ ಜಿಲ್ಲಾಧಿಕಾ ರಿಗಳು ಬರೆದಿರುವ ಪತ್ರಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಪುರಸಭೆ ಈ ಯಂತ್ರವನ್ನು ಪಂಚಾಯಿತಿಗಳಿಗೆ ಕಳುಹಿಸಿದರೆ ಪಟ್ಟಣದ ಸ್ವಚ್ಛತೆಗೆ ಅನಾನುಕೂಲವಾಗಲಿದೆ ಎಂದು ಸದಸ್ಯ ಜಿ. ಶಾಂತಕುಮಾರ್ ಹೇಳಿದರು.

ಸದಸ್ಯ ಬಿ.ಎಲ್.ಧರ್ಮೇಗೌಡ ಮಾತನಾಡಿ, ಜಿಲ್ಲಾಧಿಕಾರಿಗಳು ಹೇಳಿದ್ದನ್ನು ಕೇಳಬೇಕು ಎಂದೇನಿಲ್ಲ. ಅವರಿಗಿಂತ ಮೇಲಧಿಕಾರಿಗಳಿಗೆ ಈ ವಿಚಾರ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ಕೊನೆಗೆ ಸಭೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ನಿರ್ಣಯಿಸಿತು.

ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ. ಹಾಕಿರುವ ರೋಲಿಂಗ್ ಶೆಟ್ಟರ್‌ಗಳು ತುಂಡಾಗುತ್ತಿವೆ ಎಂದು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸದಸ್ಯ ಬಿ.ಸಿ. ಮಂಜುನಾಥ್ ಐಡಿಎಸ್‌ಎಂಟಿ ಮಳಿಗೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂಜಿನಿಯರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿ ಎಂದರು.

ಪುರಸಭೆ ವತಿಯಿಂದ ಬಡ ಜನರಿಗೆ ವಿತರಿಸಿರುವ ಸೋಲಾರ್ ಲ್ಯಾಂಪ್‌ಗಳು ಎರಡೇ ದಿನಕ್ಕೆ ಹಾಳಾಗಿವೆ ಎಂದು ಸದಸ್ಯ ಬಿ.ಡಿ. ಚನ್ನಕೇಶವ ದೂರಿದರು. ಸದಸ್ಯ ಬಿ.ಎನ್.ಚಂದ್ರಶೇಖರ್ ಮೂರು ತಿಂಗಳ ವರೆಗೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬೇಡಿ ಎಂದರು.

ಒಳ ಚರಂಡಿ ತ್ಯಾಜ್ಯ ನೀರು ಸಂಸ್ಕ ರಣಾ ಘಟಕವನ್ನು ಜೈವಿಕ ತಂತ್ರಜ್ಞಾನ ದಿಂದ ಸ್ವಚ್ಛಗೊಳಿಸಿ ವಾಸನೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಭೆ ಒಪ್ಪಿಗೆ ನೀಡಿತು. ಮುರು ತಿಂಗಳ ಕಾಲ ಪರಿಶೀಲನೆ ನಡೆಸಿ ನಂತರ ಟೆಂಡರ್ ಕರೆಯಿರಿ ಎಂದು ಸದಸ್ಯ ಬಿ.ಎ. ಜಮಾಲುದ್ದೀನ್ ಸಲಹೆ ಮಾಡಿ ದರು. ನೀರು ಶುದ್ಧೀಕರಣ ಘಟಕದಲ್ಲಿ ಫಿಲ್ಟರ್ ಬೆಡ್ ಬದಲಾಯಿಸಿದ್ದರೂ ಶುದ್ಧ ನೀರು ಬರುತ್ತಿಲ್ಲ.

ಗುತ್ತಿಗೆ ದಾರರನ್ನು ಕರೆಸಿ ಪರಿಶೀಲನೆ ನಡೆಸಿ ಎಂದು ಸದಸ್ಯರಾದ ಎಂ. ಗುರುಪಾದ ಸ್ವಾಮಿ, ಬಿ.ಎನ್. ಚಂದ್ರಶೇಖರ್, ನಾಮಕರಣ ಸದಸ್ಯೆ ತೀರ್ಥಮ್ಮ ಹೇಳಿದರು. ಉಪಾಧ್ಯಕ್ಷೆ ಅಮೀನಾ, ಮುಖ್ಯಾಧಿಕಾರಿ ಆರ್.ಕೃಷ್ಣಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.