ADVERTISEMENT

ಬತ್ತಿದ ಬಾವಿ: ಹನಿ ನೀರಿಗೂ ಹಾಹಾಕಾರ-ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 8:25 IST
Last Updated 15 ಮಾರ್ಚ್ 2012, 8:25 IST
ಬತ್ತಿದ ಬಾವಿ: ಹನಿ ನೀರಿಗೂ ಹಾಹಾಕಾರ-ಆಕ್ರೋಶ
ಬತ್ತಿದ ಬಾವಿ: ಹನಿ ನೀರಿಗೂ ಹಾಹಾಕಾರ-ಆಕ್ರೋಶ   

ಹಳೇಬೀಡು: ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ಎತ್ತಿದೆ. ಅತಿಯಾದ ಬಿಸಿಲಿನ ಝಳಕ್ಕೆ ಅಂತರ್ಜಲ ಮೂಲಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದು ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಕುಡಿಯುವ ನೀರಿನ ಕೊಳವೆ ಬಾವಿಗಳು ಸಾಕಷ್ಟು ಗ್ರಾಮಗಳಲ್ಲಿ ಬತ್ತಿಹೋಗಿವೆ. ಮೇಘರಾಜ ಕೃಪೆ ತೋರಿ ಧರೆಗಿಳಿಯದಿದ್ದರೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಲಿದೆ.

ಹಳೇಬೀಡು ಗ್ರಾ.ಪಂ ವ್ಯಾಪ್ತಿಯ ಚೀಲ ನಾಯಕ್ಕನಹಳ್ಳಿ, ಜೋಡಿ ತಿಪ್ಪನಹಳ್ಳಿ, ಬಸವರಾಜಪುರ ಗ್ರಾಮಗಳಲ್ಲಿ ಪಂಪ್‌ಸೆಟ್‌ನಲ್ಲಿ ಹನಿ ನೀರು ಬಾರದೇ ಗ್ರಾಮ ಸ್ಥರು ಕುಡಿಯುವ ನೀರಿಗಾಗಿ ಪರಿತ ಪಿಸುತ್ತಿದ್ದಾರೆ. ಚೀಲನಾಯ್ಕನಹಳ್ಳಿಯಲ್ಲಿ ಕೆಲವೇ ಕೃಷಿ ಪಂಪ್‌ಸೆಟ್‌ನಲ್ಲಿ 1 ಇಂಚಿನಷ್ಟು ಮಾತ್ರ ನೀರು ಬರುತ್ತಿದೆ. ಜನರು ಜಮೀನುಗಳಿಗೆ ಹೋಗಿ ಗಂಟೆಗಂಟಲೇ ನಿಂತು ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ಬರುವಂತಾಗಿದೆ. ನೀರಿನ ಅಭಾವದೊಂದಿಗೆ ವಿದ್ಯುತ್ ಸಮಸ್ಯೆ ಇರುವುದರಿಂದ ತೋಟದ ಬಯಲಿನಲ್ಲಿ ಅಡ್ಡಾಡಿದರೂ ಎಲ್ಲರಿಗೂ ನೀರು ದೊರಕುತ್ತಿಲ್ಲ.

ಕೆಲವರು ಎತ್ತಿನ ಗಾಡಿ ಕಟ್ಟಿಕೊಂಡು ಮಾರ‌್ನಾಲ್ಕು ಕಿ.ಮೀ.ದೂರದಿಂದ ನೀರು ತರುತ್ತಿದ್ದಾರೆ. ರೈತರು ಪಂಪ್‌ಸೆಟ್‌ನಿಂದ ಗ್ರಾಮದವರೆಗೆ ಪೈಪ್ ಜೋಡಿಸಿ ನೀರು ಹರಿಸುವ ಸಾಹಸಕ್ಕೆ ಕೈಹಾಕಿದ್ದಾರೆ. ಪಂಪ್ ಚಾಲೂ ಮಾಡಿ ಗ್ರಾಮಕ್ಕೆ ನೀರು ಬಂದು ಬೀಳುವುದರೊಳಗೆ ವಿದ್ಯುತ್ ನಾಪತ್ತೆ ಯಾಗುತ್ತದೆ. ವಿದ್ಯುತ್ ಸಂಪರ್ಕ ಇದ್ದರೂ ಮೊಟಾರ್‌ಪಂಪ್ ನಿರಂತರವಾಗಿ ನೀರೆ ತ್ತುವಷ್ಟು ಜಲ ಬಾವಿಗಳಲ್ಲಿ ಇಲ್ಲದಂತಾಗಿದೆ.

ಜಾತ್ರೆ ಹಾಗೂ ಹಬ್ಬದ ಸಮಯವಾಗಿರುವುದರಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ಸಲುವಾಗಿ ಗ್ರಾಮದವರೇ ಆದ ಗ್ರಾಪಂ ಅಧ್ಯಕ್ಷ ಸಿ.ಆರ್.ಲಿಂಗಪ್ಪ ಪ್ರೇಮಣ್ಣ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡುತ್ತಿದ್ದಾರೆ. `ಟ್ಯಾಂಕರ್‌ನಿಂದ ಜನರಿಗೆ ನೀರು ಕೊಡುವುದಕ್ಕೆ ಪ್ರತಿನಿತ್ಯ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಶಾಶ್ವತ ನೀರಿನ ವ್ಯವಸ್ಥೆಗೆ ಜಿಲ್ಲಾ ಪಂಚಾಯತಿಯ ಸಹಕಾರದ ಅಗತ್ಯವಿದೆ.

ಬೇಲೂರು ಯಗಚಿ ನದಿ ನೀರು ಹರಿಸುವ ಕೆಲಸ ಜರೂರಾಗಿ ಆಗಬೇಕಾಗಿದೆ~ ಎನ್ನುತ್ತಾರೆ ಲಿಂಗಪ್ಪ.
ಅಡಗೂರು ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಅಂತರ್ಜಲ ಪ್ರಮಾಣ ಇಳಿಮುಖವಾಗುತ್ತದೆ. ಈ ಭಾಗದಲ್ಲಿ ನೀರಿನಲ್ಲಿ ಫ್ಲೊರೈಡ್ ಅಂಶ ಹೆಚ್ಚಾಗಿದ್ದು, ಶುದ್ಧ ಕುಡಿಯುವ ನೀರಿಗಾಗಿ ಹಳ್ಳಿಗರು ಪರದಾಡುತ್ತಿದ್ದಾರೆ.

ದೊಡ್ಡಕೋಡಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಶಿವನೇನಹಳ್ಳಿ, ದೊಂಬರಟ್ಟಿ. ಗೊಲ್ಲಕರಟ್ಟಿ, ಕೊಂಡ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಬಾವಿಗಳಲ್ಲಿ ನೀರಿದ್ದರೂ, ವಿದ್ಯುತ್ ಕೊರತೆಯಿಂದ ತೊಂದರೆಯಾಗಿದೆ.
ಮಾದಿಹಳ್ಳಿ ಹಳೇಬೀಡು ಹೋಬಳಿ ಗಳಲ್ಲಿ ಕೆರೆ-ಕಟ್ಟೆಗಳು ಒಣಗಿರುವುದರಿಂದ ದನಕರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಅರಸೀಕೆರೆ ತಾಲ್ಲೂಕು ಹಾಗೂ ಹಳೇಬೀಡು ಹೋಬಳಿಯ 12 ಹಳ್ಳಿಗಳಲ್ಲಿ ಶುದ್ದವಾದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಬೇಲೂರು ಯಗಚಿ ನದಿಯಿಂದ ನಿರ್ಮಿಸಿರುವ ಪೈಪ್ ಲೈನ್‌ನಲ್ಲಿ ನೀರು ಹರಿಸಲಾಗಿದೆ. ಪ್ರತಿನಿತ್ಯ ಅಲ್ಲಲ್ಲೆ ಪೈಪ್‌ಲೈನ್ ಕಿತ್ತು ಹೋಗುತ್ತಿದ್ದು, ಹತ್ತಾರು ಗ್ರಾಮಗಳಿಗೆ ಹರಿಸುವಷ್ಟು ನೀರು ರಸ್ತೆ ಪಾಲಾಗುತ್ತಿದೆ. ನೀರು ಶುದ್ದಿಕರಿಸಿ ಸಮಸ್ಯೆ ತಲೆದೊರಿದ ಗ್ರಾಮಗಳಿಗಾದರೂ ಹರಿಸದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಚೀಲನಾಯ್ಕನಹಳ್ಳಿ ಗ್ರಾಮಸ್ಥರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.