ಹಾಸನ: `ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಪೂರೈಕೆ ಕೊರತೆಯಿಂದ ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಅನುದಾ ನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆಗೆ ಸಮಸ್ಯೆ ಉಂಟಾಗುತ್ತಿದೆ. ಈಗ ಅಧಿಕಾರಿಗಳು ಸಹ ಜವಾಬ್ದಾರಿ ಯಿಂದ ನುಣುಚಿಕೊಂಡು ಎಲ್ಲ ಹೊಣೆಯನ್ನೂ ಶಿಕ್ಷಕರ ಮೇಲೆ ಹಾಕುತ್ತಿದ್ದಾರೆ. ಶಿಕ್ಷಕರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು~ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವೇಗೌಡ ಒತ್ತಾಯಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈಚಿನ ದಿನಗಳಲ್ಲಿ ಅಡುಗೆ ಅನಿಲದ ಸಮಸ್ಯೆ ತೀವ್ರವಾಗಿದೆ. ಜತೆಗೆ ಬೆಲೆಯೂ ಏರಿಕೆಯಾಗಿದೆ. ಹಿಂದೆ ಇಲಾಖೆಯಿಂದಲೇ ಹಣ ಕೊಟ್ಟು ಅನಿಲ ಪೂರೈಸಲಾಗುತ್ತಿತ್ತು. ಆದರೆ ಈಗ ಶಾಲಾಭಿವೃದ್ಧಿ ಸಮಿತಿಗೆ ಹಣ ಕೊಡುತ್ತೇವೆ ಅದರಲ್ಲಿ ನೀವೇ ಖರೀದಿಸಿಕೊಳ್ಳಿ ಎನ್ನುತ್ತಿದ್ದಾರೆ. ಅವರು ಕೊಡುವ ಹಣದಲ್ಲಿ ಬೇಕಾದಷ್ಟು ಸಿಲಿಂಡರ್ ಖರೀದಿ ಸಾಧ್ಯವಿಲ್ಲ.
ಕಟ್ಟಿಗೆ ಬಳಸಿ ಅಡುಗೆ ಮಾಡಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜತೆಗೆ ಕಟ್ಟಿಗೆ ಖರೀದಿಗೆ ಮಗುವೊಂದಕ್ಕೆ 30 ಪೈಸೆಯಂತೆ ಅನುದಾನ ನೀಡುವುದಾಗಿ ಹೇಳುತ್ತಾರೆ. ಕಟ್ಟಿಗೆಯನ್ನು ಎಲ್ಲಿಂದ ತರಬೇಕು ? ಅಡುಗೆ ಅನಿಲವಾದರೆ ಮಗುವೊಂದಕ್ಕೆ 85 ಪೈಸೆಯಂತೆ ಮಂಜೂರು ಮಾಡಲಾಗು ತ್ತಿದೆ.
ಅದೂ ಅಲ್ಲದೆ ಕಟ್ಟಿಗೆ ಬಳಸಿ ಅಡುಗೆ ಮಾಡುವುದಾ ದರೆ ನಾವು ಬರುವುದಿಲ್ಲ ಎಂದು ಅಡುಗೆಯವರೂ ಬೆದರಿಕೆ ಹಾಕುತ್ತಿದ್ದಾರೆ. ಊಟದಲ್ಲಿ ಹೆಚ್ಚುಕಡಿಮೆಯಾದರೆ ಕೊನೆಗೆ ಶಿಕ್ಷಕರ ಮೇಲೆ ಎಲ್ಲ ಆರೋಪ ಹೊರಿಸಿ ಸಸ್ಪೆಂಡ್ ಮಾಡುತ್ತಾರೆ. ನಾವು ಪಾಠ ಮಾಡುವುದು ಬಿಟ್ಟು ಈ ಎಲ್ಲ ಕೆಲಸಗ ಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು~ ಎಂದು ನುಡಿದರು.
ವೇತನ ಬಿಡುಗಡೆಗೆ ಒತ್ತಾಯ: ಜಿಲ್ಲೆಯ ಶಿಕ್ಷಕರಿಗೆ ಮಾಸಿಕ ವೇತನ ಬಿಡುಗಡೆ ಮಾಡದಿರುವುದರಿಂದ ತುಂಬ ತೊಂದರೆಯಾಗಿದೆ. ಕೂಡಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಶಿಕ್ಷಕರ ಈ ಎರಡು ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸದಿದ್ದರೆ ಪ್ರತಿಭಟನೆಗೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಂಘದ ಉಪಾಧ್ಯಕ್ಷ ಕೆ.ಎ.ಕಾಳೇಗೌಡ , ಸಹಕಾರ್ಯ ದರ್ಶಿ ಕೆ.ಎನ್.ಚೈತ್ರಾ, ಖಜಾಂಜಿ ಹಿರಿಯಣ್ಣ ಕುಮಾರ್ ಬಿ.ಎನ್.ಸಂಘಟನಾ ಕಾರ್ಯದರ್ಶಿ ಸಿ.ಎಂ.ನಾಗರತ್ನಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.