ADVERTISEMENT

ಬೀದಿದೀಪಗಳ ನಿರ್ವಹಣೆಗೆ ಸ್ವಯಂಚಾಲಿತ ಸ್ವಿಚ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 10:05 IST
Last Updated 23 ಫೆಬ್ರುವರಿ 2012, 10:05 IST

ಹಾಸನ: `ಹಗಲು ಹೊತ್ತಿನಲ್ಲೂ ಬೀದಿ ದೀಪಗಳು ಉರಿಯುತ್ತಿರುವ ಬಗ್ಗೆ ಜಿಲ್ಲೆಯ ವಿವಿಧ ಕಡೆಗಳಿಂದ ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನ ಒಂದು ಗ್ರಾಮದಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಸ್ವಯಂಚಾಲಿತ ಸ್ವಿಚ್‌ಗಳನ್ನು ಅಳವಡಿಸಲು ಮುಂದಾಗಬೇಕು~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ರಾಜ್ಯದಲ್ಲಿ ವಿದ್ಯುತ್ ಅಭಾವವಿದೆ. ಬೇಡಿಕೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಉತ್ಪಾದನೆಯೂ ಕುಸಿಯುತ್ತಿದೆ. ಇಂಥ ಸಂದರ್ಭದಲ್ಲಿ ವಿದ್ಯುತ್ ವ್ಯಯಮಾಡಲಾಗದು. ಮಧ್ಯಾಹ್ನದಲ್ಲೂ ಬೀದಿ ದೀಪ ಉರಿಯುತ್ತಿದ್ದರೆ ಜನರು, ಮಾಧ್ಯಮಗಳು ಪ್ರಶ್ನಿಸುವುದು ಸಹಜ. ಹಾಸನದ ಸಂಸ್ಥೆಯೊಂದು ಸ್ವಯಂಚಾಲಿತ ಸ್ವಿಚ್‌ಗಳನ್ನು ತಯಾರಿ  ಸುತ್ತಿದ್ದು, ತಲಾ 450 ರೂಪಾಯಿ ಬೆಲೆಯಲ್ಲಿ ಸ್ವಿಚ್‌ಗಳನ್ನು ಒದಗಿಸುವುದಾಗಿ ತಿಳಿಸಿದೆ. ಪ್ರಾಯೋಗಿಕವಾಗಿ ಪ್ರತಿ ತಾಲ್ಲೂಕಿನ ಒಂದು ಗ್ರಾಮದಲ್ಲಿ ಇದನ್ನು ಅಳವಡಿಸಿ ನೋಡಬೇಕು ಎಂದು ಸೂಚನೆ ನೀಡಿದರು.

ಇಲಾಖೆಯವರು ಜಿ.ಪಂ.ಗೆ ನೀಡಿರುವ ವರದಿಯಲ್ಲಿ ಗುರಿಯನ್ನು ನಮೂದಿಸದೆ ಬರಿಯ ಸಾಧನೆಯನ್ನು ಮಾತ್ರ ನಮೂದಿಸಿದ್ದಕ್ಕೆ ಜಿ.ಪಂ. ಸದಸ್ಯರಾದ ಹುಚ್ಚೇಗೌಡ ಹಾಗೂ ಎಂ.ಕೆ. ದ್ಯಾವಯ್ಯ ಅವರು ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. `ನಿಮ್ಮ ಹುಳುಕುಗಳನ್ನು ಮುಚ್ಚಿಡುವ ಸಲುವಾಗಿ ವಾರ್ಷಿಕ ಗುರಿ ನಮೂದಿಸದೆ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದ್ದೀರಿ~ ಎಂದು ಹುಚ್ಚೇಗೌಡ ಆರೋಪಿಸಿದರೆ, ಮಲ್ಲಿಗೆವಾಳುವಿನಲ್ಲಿ ಒಂದು ಕಂಬ ಸ್ಥಳಾಂತರಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಇಲಾಖೆಯಲ್ಲಿ ಒಂದು ಕಡತ ಮುಂದೆ ಸಾಗಬೇಕಾದರೆ ಕನಿಷ್ಠ ಆರು ತಿಂಗಳು ಬೇಕಾಗುತ್ತದೆ~ ಎಂದು ದ್ಯಾವಯ್ಯ ದೂರಿದರು.

ಕಡಿಮೆ ಅಭಿವೃದ್ಧಿ ದಾಖಲಿಸಿರುವ ಎಲ್ಲ ಇಲಾಖೆಗಳೂ ಮಾರ್ಚ್ ಅಂತ್ಯದೊಳಗೆ ಗುರಿ ಸಾಧಿಸಲು ಬೇಕಾದ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಕೆಲವೆಡೆ  ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನದಿಯಂಚಿನ ಗ್ರಾಮಗಳಿಗೆ ಮಲ್ಟಿ ವಿಲೇಜ್ ಯೋಜನೆಯಡಿ ನದಿಯ ನೀರನ್ನೇ ನೀಡಲು ಸಮಗ್ರ ಯೋಜನೆ ರೂಪಿಸಬೇಕು. ಪ್ರತಿ ಬಾರಿ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ಚರ್ಚೆಯಾಗುತ್ತದೆ. ಮುಂದಿನ ಬಾರಿ ಇದಕ್ಕೆ ಅವಕಾಶ ನೀಡಬಾರದು. ತಿಂಗಳೊಳಗೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ತಲಾ ಎರಡರಿಂದ ಮೂರು ಕೋಟಿ ರೂಪಾಯಿಯ  ಯೋಜನೆಗಳನ್ನು ಸಿದ್ಧಪಡಿಸಿಕೊಂಡೇ ಸಭೆಗೆ ಬರಬೇಕು ಎಂದು ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ನಿರಂತರವಾಗಿ ಪಡಿತರ ನೀಡಿ
ಪಡಿತರ ವಿತರಿಸುವ ಅಂಗಡಿಗಳವರು ಕೇವಲ ಮೂರು ದಿನ ಮಾತ್ರ ಪಡಿತರ ಧಾನ್ಯಗಳನ್ನು ವಿತರಿಸುತ್ತಿದ್ದಾರೆ. ಇದರ ಬದಲು ಧಾನ್ಯಗಳ ಸರಬರಾಜಾದ ದಿನದಿಂದ ತಿಂಗಳ ಕೊನೆಯವರೆಗೆ ಪ್ರತಿ ದಿನವೂ ಅದನ್ನು ವಿತರಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.

ಡಿಸೆಂಬರ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಪ್ರತಿ ಅಂಗಡಿಯಲ್ಲೆ ಎಲೆಕ್ಟ್ರಾನಿಕ್ ತ್ರಾಸುಗಳನ್ನು ಹಾಕಬೇಕು ಮತ್ತು ಧಾನ್ಯಗಳ ಬೆಲೆ ಮತ್ತಿತರ ವಿವರ ನೀಡುವ ಫಲಕ ಹಾಕಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಅದು ಪಾಲನೆಯಾಗಿಲ್ಲ. ವಿತರಕರು ತೂಕದಲ್ಲಿ 50 ರಿಂದ 100  ಗ್ರಾಂ ನಷ್ಟು ವಂಚನೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಬೆಲೆಯಲ್ಲಿ 40 ರಿಂದ 50ಪೈಸೆಯಷ್ಟು ಹೆಚ್ಚಿಗೆ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಏನು ಮಾಡಿದ್ದೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು.

`ಜಿಲ್ಲೆಯಲ್ಲಿ 225 ಅಂಗಡಿಗಳ ಮಾಲೀಕರು ಎಲೆಕ್ಟ್ರಾನಿಕ್ ತ್ರಾಸು ಖರೀದಿಸಿದ್ದಾರೆ ಮತ್ತು ಎಲ್ಲ ಅಂಗಡಿಗಳಲ್ಲೂ ಫಲಕ ಹಾಕಿದ್ದರೂ ಮಾಲೀಕರು ಅದರಲ್ಲಿ ಸರಿಯಾದ ದಾಖಲೆಗಳನ್ನು ನಮೂದಿಸುತ್ತಿಲ್ಲ. ಎಲ್ಲರಿಗೂ ಈ ಬಗ್ಗೆ ಸೂಚನೆ ನೀಡಲಾಗುವುದು ಎಂದರು. ಇದರಿಂದ ಸಂತೃಪ್ತರಾಗದ ಅಧ್ಯಕ್ಷರು, `ಮುಂದಿನ ಸಭೆಗೆ ಬರುವಷ್ಟರಲ್ಲಿ ಎಲ್ಲ ಅಂಗಡಿಗಳಲ್ಲೂ ಎಲೆಕ್ಟ್ರಾನಿಕ್ ತ್ರಾಸುಗಳಿರಬೇಕು ಮತ್ತು ಪ್ರತಿ ಅಂಗಡಿಯಲ್ಲೂ ವಿವರಗಳನ್ನು ನೀಡುವ ಫಲಕ ಇರಬೇಕು. ಇದಕ್ಕೆ ಒಪ್ಪದ  ಅಂಗಡಿಗಳ ಮಾಲೀಕರ ಪರವಾನಿಗೆಯನ್ನೇ ರದ್ದು ಮಾಡಿ~ ಎಂದು ಸೂಚನೆ ನೀಡಿದರು.

ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹೊಸ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಪ್ರಸಕ್ತ ಅದು ಆರಂಭಿಕ ಹಂತದಲ್ಲಿರುವುದರಿಂದ ಮುಂದಿನ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವುದಾಗಿ ಡಿಡಿಪಿಐ ಚಾಮರಾಜ್ ತಿಳಿಸಿದರು.

ಜಿಲ್ಲೆಯಲ್ಲಿ ಒಂದೆರಡು ಕಡೆ ಪ್ರಾಯೋಗಿಕವಾಗಿ `ಸಮುದಾಯ ಗೋಬರ್ ಗ್ಯಾಸ್~ ಘಟಕಗಳನ್ನು ಸ್ಥಾಪಿಸಿ ಸುತ್ತ ಮುತ್ತಲಿನ ಮನೆಗಳವರಿಗೆ ಪೈಪ್‌ಲೈನ್ ಮೂಲಕ ಸಂಪರ್ಕ ಕಲ್ಪಿಸುವ ಸಾಧ್ಯಾಸಾಧ್ಯತೆ ಬಗ್ಗೆ ವರದಿ ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸತ್ಯನಾರಾಯಣ ಸೂಚನೆ ನೀಡಿದರು.ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಜನ್ ಕುಮಾರ್, ಕಾರ್ಯದರ್ಶಿ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.