ADVERTISEMENT

ಬೆನ್ನಿಹಿನ್‌ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 5:28 IST
Last Updated 10 ಜನವರಿ 2014, 5:28 IST

ಹಾಸನ: ‘ಜ. 15 ರಂದು ಬೆಂಗಳೂರಿಗೆ ಬರುತ್ತಿರುವ ಕ್ರೈಸ್ತ ಧರ್ಮ ಪ್ರಚಾರಕ ಬೆನ್ನಿಹಿನ್‌ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಗುರುವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಎನ್‌.ಆರ್‌. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಅಲ್ಲಿಂದ ಜಿಲ್ಲಾಧಿಕಾರಿಗೆ ಕಚೇರಿಗೆ ಬಂದು ಮನವಿ ಸಲ್ಲಿಸಿದರು.

‘ಬೆನ್ನಿಹಿನ್‌ ಅಕ್ರಮ ಪ್ರವಾಸಿ ವೀಸಾ ಮೂಲಕ ಬೆಂಗಳೂರಿಗೆ ಬರುತ್ತಿದ್ದಾರೆ. ಕಾನೂನು ಬಾಹಿರವಾಗಿ ಜ. 15ರಂದು ಬೆಂಗಳೂರಿನ ಯಲಹಂಕದಲ್ಲಿ ಪ್ರಾರ್ಥನಾ ಸಭೆ ಆಯೋಜಿಸಲಾಗುತ್ತಿದೆ. ಇದರಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಹುನ್ನಾರ ಅಡಗಿದ್ದು, ಈ ಸಭೆಗೆ ನಿಷೇಧ ಹೇರಬೇಕು. ರಾಜ್ಯ ಸರ್ಕಾರ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ದಮನ ಮಾಡಲು ಕ್ರೈಸ್ತರ ಮೂಢನಂಬಿಕೆಗೆ ಕುಮ್ಮಕ್ಕು ನೀಡುತ್ತಿದೆ’ ಎಂದು ಆರೋಪಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ಆರ್‌. ವಿಜಯ್‌ ಕುಮಾರ್‌ ಹಾಜರಿದ್ದರು.

17ಕ್ಕೆ ಮಕ್ಕಳ ಸಾಹಿತ್ಯ ಕಮ್ಮಟ
ಹಾಸನ: ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆ, ಬಾಲಭವನ ವತಿಯಿಂದ ಬಾಲಸಾಹಿತಿಗಳನ್ನು ಪ್ರೋತ್ಸಾಹಿಸುವ ಮಕ್ಕಳ ಸಾಹಿತ್ಯ ಕಮ್ಮಟ ಆಯೋಜಿಸಲಾಗಿದೆ.

ಕಮ್ಮಟ ಜ.17ರಂದು ಬೆಳಿಗ್ಗೆ 10 ರಿಂದ ಹಾಸನದ ರಾಮಕೃಷ್ಣ ವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು. ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆ ಜೊತೆಗೆ ಹಿರಿಯ ಸಾಹಿತಿಗಳಿಂದ ಉಪನ್ಯಾಸ ಏರ್ಪಡಿಸಲಾಗಿದೆ. 8 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಅವಕಾಶ ಇರುತ್ತದೆ.

ಹಾಸನ ತಾಲ್ಲೂಕು ವ್ಯಾಪ್ತಿಯ ಆಸಕ್ತ ಅರ್ಹ ಮಕ್ಕಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಹಾಸನ ಅಥವಾ ದೂರವಾಣಿ 08172–-267223, 9844511424 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT