ADVERTISEMENT

ಮನೆ ಹಂಚಿಕೆ: ಜಾಗೃತ ಸಮಿತಿ ನಿರ್ಣಯ ರದ್ದು

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 8:10 IST
Last Updated 22 ಜೂನ್ 2012, 8:10 IST

ಅರಕಲಗೂಡು: ವಸತಿ ಯೋಜನೆಯಡಿ ಮೂರನೆ ಹಂತದ ಮನೆಗಳ ವಿತರಣೆಗೆ ಶಾಸಕರ ಅಧ್ಯಕ್ಷತೆಯ ಜಾಗೃತ ಸಮಿತಿ ಕೈಗೊಂಡಿರುವ ನಿರ್ಣಯ ರದ್ದುಗೊಳಿ ಸುವಂತೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಂತೋಷ್‌ಗೌಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಗುರುವಾರ ನಡೆಯಿತು. ಬಸವ ಇಂದಿರಾ ವಸತಿ ಯೋಜನೆಯಡಿ 3ನೇ ಹಂತಕ್ಕಾಗಿ ತಾಲ್ಲೂಕಿಗೆ 2 ಸಾವಿರ ಮನೆಗಳು ಮಂಜೂರಾಗಿದೆ. ಇವುಗಳ ವಿತರಣೆಗಾಗಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜಾಗೃತ ಸಮಿತಿ ಸಭೆ ಕೈಗೊಂಡಿರುವ ನಿರ್ಣಯ ನಿಯಮ ಬಾಹಿರವಾಗಿದೆ ಎಂದು ಅಧ್ಯಕ್ಷ ಸಂತೋಷ್‌ಗೌಡ ಆರೋಪಿಸಿದರು.

ಜಾಗೃತ ಸಮಿತಿ ಸದಸ್ಯರು ನೀಡಿದ ಸಲಹೆಯನ್ನು ಕಡೆಗಣಿಸಲಾಗಿದೆ. ಸಭೆಯ ನಿರ್ಣಯ ತಿರುಚಲಾಗಿದೆ. ಅಧ್ಯಕ್ಷರು ಮನಸ್ಸಿಗೆ  ಬಂದಂತೆ ಮನೆಗಳನ್ನು ವಿತರಣೆ ಮಾಡಲು ಗುರಿ ನಿಗದಿ ಪಡಿಸಿದ್ದಾರೆ. ಇದು ನಿಯಮಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಿ ಹೊಸ ಸಭೆ ನಡೆಸಿ ನಿಯಮಗಳಿಗೆ ಅನುಗುಣವಾಗಿ ಮನೆ ವಿತರಿಸಲು ಕ್ರಮಕ್ಕೆ ಸೂಚನೆ ನೀಡುವಂತೆ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಿದರು.

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಬರ ಪರಿಹಾರ ಕಾಮಗಾರಿಯಲ್ಲಿ ಕುಡಿ ಯುವ ನೀರು ಒದಗಿಸಲು ರಚಿಸಿರುವ ಜಾಗೃತ ಸಮಿತಿ
ಸರಿಯಾದ ರೀತಿ ಕಾರ್ಯ ನಿರ್ವ ಹಿಸಿಲ್ಲ ಎಂದು ಸದಸ್ಯರು ಆರೋಪಿಸಿ ದರು. ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಪರಿಹಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಕೆಲವು ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಾಮಗಾರಿ ನಡೆದ ಕಡೆ ಮತ್ತೆ ಕಾಮಗಾರಿ ಕೈಗೊಂಡು ಸಾರ್ವ ಜನಿಕ ಹಣದ ದುರ್ಬಳಕೆ ಮಾಡಿಕೊ ಳ್ಳಲಾಗಿದೆ ಎಂದು ಸದಸ್ಯರು ಆರೋಪಿಸಿದರು.

ಕಿರು ನೀರು ಯೋಜನೆಗಳಿಗೆ ವಿಳಂಬ ನೀತಿ ಅನುಸರಿಸದೆ ವಿದ್ಯುತ್ ಸಂಪರ್ಕ ನೀಡಲು ಸೆಸ್ಕ್ ಅಧಿಕಾರಿಗಳಿಗೆ ತಿಳಿಸಲಾ ಯಿತು. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ತ್ವರಿತವಾಗಿ ಮಂಜೂರಾತಿ ನೀಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾ ಯಿತು. ನದಿ ದಂಡೆಯ ಗ್ರಾಮಗಳಲ್ಲಿ ಕೊಳೆಚೆ ಹಾಗೂ ಶೌಚಾಲಯದ ನೀರನ್ನು ನದಿ ನೀರಿಗೆ ಹರಿಯ ಬಿಡಲಾಗುತ್ತಿದೆ.
 
ಇದನ್ನು ತಡೆಯಲು ಕ್ರಮಕ್ಕೆ ಸರ್ಕಾರ ಮುಂದಾಗಬೇಕು, ಮಲಿನ ನೀರನ್ನು ಶುದ್ಧೀಕರಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಡೆಸಲು ನಿರ್ಣಯ ಅಂಗೀಕರಿಸಲಾಯಿತು.

ಗ್ರಾಮ ಪಂಚಾಯತಿಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗಾಗಿ ಮೀಸಲಾದ ಅನುದಾನದ ಹಣದ ಬಳಕೆ ಕುರಿತು ಮಾಹಿತಿ ನೀಡಲು ಅಧಿಕಾರಿ ಗಳು ವಿಫಲವಾದ ಹಿನ್ನೆಲೆಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಸಭೆಯ ಕ್ಷಮೆ ಕೋರಿದ ಘಟನೆ ನಡೆಯಿತು.

ಗ್ರಾಮ ಪಂಚಾಯತಿಗಳಲ್ಲಿ ಶೇ 22.5 ರ ಪರಿಶಿಷ್ಠರ ಅನುದಾನದ ಹಣದ ದುರ್ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅದರ ಬಳಕೆ ಕುರಿತು ಚರ್ಚಿಸಲು ಅಜೆಂಡಾದಲ್ಲಿ ವಿಷಯ ನಮೂದಿಸಲಾಗಿತ್ತು. ವಿಷಯ ಚರ್ಚೆಗೆ ಬಂದಾಗ ಅಧಿಕಾರಿಗಳಲ್ಲಿ ಯಾವುದೆ ಮಾಹಿತಿ ಇರಲಿಲ್ಲ. ಇದರಿಂದ ಸಿಟ್ಟುಗೆದ್ದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
 
ಸೂಕ್ತ ಮಾಹಿತಿ ಒದಗಿಸಲು ವಿಫಲವಾಗಿರುವುದು ಅಧಿಕಾರಶಾಹಿಯ ಬೇಜವಾಬ್ದಾರಿತನ ವಾಗಿದೆ. ಪರಿಶಿಷ್ಠರಿಗೆ ಮೀಸಲಾದ ಹಣ ದಲ್ಲಿ ವ್ಯಾಪಕ ವಾದ ಅಕ್ರಮ ನಡೆದಿದ್ದು, ಇದನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ದೂರಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೀರ್ತಿರಾಜ್, ದೇವರಾಜೇಗೌಡ, ಸತೀಶ್, ವೀರೇಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.