ಬಾಣಾವರ: ಹೋಬಳಿಯಲ್ಲಿ ಈ ಬಾರಿಯೂ ಮಳೆರಾಯ ಕಣ್ಣ ಮುಚ್ಚಾಲೆಯಾಡುತ್ತಿರುವುದರಿಂದ ರೈತರು ಇನ್ನೂ ತಮ್ಮ ನೊಗ, ನೇಗಿಲುಗಳನ್ನು ಹೊರ ತೆಗೆಯಲು ಯೋಚಿಸುವಂತಾಗಿದೆ.
ಕಳೆದ ಒಂದು ದಶಕದಿಂದ ಮುಂಗಾರು ಮಳೆ ಸಮರ್ಪಕವಾಗಿ ಬಾರದೆ ರೈತರನ್ನು ಸಂಕಷ್ಟಕ್ಕೀಡು ಮಾಡಿರುವುದರಿಂದ ಈ ಭಾಗದ ರೈತರು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳಲು ಎರಡೆರಡು ಬಾರಿ ಯೋಚಿಸುವಂತಾಗಿದೆ. ಕಳೆದ ವಾರ ಒಂದೆರಡು ಬಾರಿ ತುಂತುರು ಮಳೆ ಬಂದರೂ ಬಿತ್ತನೆಗೆ ಪೂರಕವಾದಷ್ಟು ಭೂಮಿ ತಂಪಾಗಿಲ್ಲ.
ಮುಂಗಾರು ಪೂರ್ವದಲ್ಲಿ ಸುರಿಯುವ ಭರಣಿ ಮತ್ತು ಕೃತಿಕಾ ಮಳೆಗಳು ಮುಗಿಯುತ್ತಾ ಬಂದರೂ ಹದವಾದ ಮಳೆಯಾಗದೆ ಈ ವರ್ಷವೂ ರೈತರನ್ನು ಚಿಂತೆಗೀಡು ಮಾಡಿದೆ. ಈ ವೇಳೆಗಾಗಲೇ ಮುಂಗಾರು ಬೆಳೆಗಳಾದ ಎಳ್ಳು, ಹೆಸರು, ಜೋಳ, ತೊಗರಿ, ಹಲಸಂದೆ, ಸೂರ್ಯಕಾಂತಿ ಬಿತ್ತನೆ ಕಾರ್ಯ ನಡೆಯಬೇಕಿತ್ತು. ಆದರೆ ವರುಣನ ಅವಕೃಪೆಯಿಂದ ರೈತರು ಈ ವರ್ಷವೂ ಚಡಪಡಿಸುವಂತಾಗಿದೆ.
ಭರಪೂರ ಕೃಷಿ ಮಾಡಿ ದಶಕಗಳು ಕಳೆದಿರುವುದರಿಂದ ರೈತಾಪಿ ಜನರಿಗೆ ಜಮೀನು ಹದ ಮಾಡಲು ಎತ್ತುಗಳದ್ದೇ ಸಮಸ್ಯೆ. ಜಾನುವಾರು ಸಾಕುವವರ ಸಂಖ್ಯೆ ಕ್ಷೀಣಿಸಿ ಒಂದೆಡೆ ಕೃಷಿ ಕೆಲಸಗಳಿಗೆ ಎತ್ತುಗಳ ಕೊರತೆ ಕಂಡು ಬಂದರೆ ಮತ್ತೊಂದೆಡೆ ಕೃಷಿ ಕೆಲಸ ಮಾಡಲು ಜನರು ಸಿಗುವುದೇ ಕಷ್ಟವಾಗುತ್ತದೆ ಎನ್ನುತ್ತಾರೆ ಕೃಷಿಕ ನಂಜಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.