ಹಾಸನ: ‘ಮೋದಿ ಅಲೆ, ಬಿರುಗಾಳಿ ಎಂಬುದೆಲ್ಲ ಭ್ರಮೆ. ಕಾಂಗ್ರೆಸ್ ದೊಡ್ಡ ಆಲದ ಮರವಾಗಿದ್ದು, ಎಂಥ ಅಲೆ ಬಂದರೂ ಅದನ್ನು ಎದುರಿಸುವ ಶಕ್ತಿ ಈ ಪಕ್ಷಕ್ಕಿದೆ’ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಹಾಸನದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ರ್‌್ಯಾಲಿಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ಒಂದು ಅಲೆಮಾರಿ ಪಕ್ಷ. ಸ್ವಾರ್ಥ ಸಾಧನೆಗಾಗಿ ಆ ಪಕ್ಷ ರಾಜಕೀಯ ಮಾಡುತ್ತಿದೆಯೇ ವಿನಾ ಜನ ಸಮುದಾಯಕ್ಕೆ ಈ ಪಕ್ಷದಿಂದ ಯಾವ ಪ್ರಯೋಜನವೂ ಆಗಿಲ್ಲ.
ಅದೆಷ್ಟೋ ಸ್ವಾಭಿಮಾನಿ ನಾಯಕರ ರಾಜಕೀಯವನ್ನೇ ಹಾಳು ಮಾಡಿದ ಶ್ರೇಯಸ್ಸು ಈ ಪಕ್ಷಕ್ಕೆ ಸೇರುತ್ತದೆ. ಜಾತ್ಯತೀತತೆ, ಕೋಮು ಸೌಹಾರ್ದಗಳ ಬಗ್ಗೆ ಮಾತನಾಡುತ್ತಲೇ ಈ ಪಕ್ಷ ಅವಕಾಶ ಬಂದಾಗ ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ಮಾಡಿದೆ. ಆ ಮೂಲಕ ಬಿಜೆಪಿ ರಾಜ್ಯದಲ್ಲಿ ನೆಲೆಯೂರಲು ಅವಕಾಶ ಕಲ್ಪಿಸಿದೆ’ ಎಂದು ಮೋಟಮ್ಮ ಟೀಕಿಸಿದರು.
ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಮಾತ ನಾಡಿ, ‘ಈ ಬಾರಿ ಜಿಲ್ಲೆಯ ಜನರು ಸ್ವಾಭಿಮಾನ ಉಳಿಸಿ ಕೊಳ್ಳಲು ಮತ ನೀಡಬೇಕು. ಆತ್ಮಾಭಿಮಾನ ವುಳ್ಳ ವ್ಯಕ್ತಿ ಜೆಡಿಎಸ್ ನಲ್ಲಿ ಉಳಿಯಲು ಸಾಧ್ಯವಿಲ್ಲ. ನಾನೂ ಹಲವು ವರ್ಷಗಳ ಕಾಲ ಆ ಪಕ್ಷದಲ್ಲಿ ಸೇವೆ ಸಲ್ಲಿಸಿದೆ. ಆದರೆ, ಈಗ ಸ್ವಾಭಿಮಾನಿಗಳು ಆ ಪಕ್ಷದಲ್ಲಿ ಉಳಿಯುವಂಥ ವಾತಾವರಣ ಇಲ್ಲ. ಪಕ್ಷದ ಮುಖಂಡರು ಇತರ ನಾಯಕರನ್ನು ಹಾಗೂ ಜಿಲ್ಲೆಯ ಜನರನ್ನು ಗುಲಾಮರಂತೆ ಕಾಣುತ್ತಾರೆ’ ಎಂದರು.
ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಎ. ಮಂಜು ಮಾತನಾಡಿ, ‘ಜೆಡಿಎಸ್ ಆಡಳಿತದಿಂದ ಜಿಲ್ಲೆಯಲ್ಲಿ ಒಂದು ಕುಟುಂಬದ ಅಭಿವೃದ್ಧಿ ಆಗಿದೆಯೇ ವಿನಾ ಇಡೀ ಜಿಲ್ಲೆಯ ಅಭಿವೃದ್ಧಿ ಆಗಿಲ್ಲ. ದೇವೇಗೌಡರು ಇದು ನನ್ನ ಕೊನೆಯ ಚುನಾವಣೆ ಎಂದಿದ್ದಾರೆ.
ಹಿಂದೆ ಮುಖ್ಯಮಂತ್ರಿಯಾಗಿ, ಪ್ರಧಾನಿ ಆದಾಗಲೂ ಅವರಿಂದ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಾಗಲಿಲ್ಲ, ಜಿಲ್ಲೆಯ ನೀರಾವರಿ ಯೋಜನೆಗಳೆಲ್ಲ ನೆನೆಗುದಿಗೆ ಬಿದ್ದಿವೆ. ಈಗ ಅವರೇ ತೃತೀಯ ರಂಗದ ಹೆಸರಿನಲ್ಲಿ ಜಯಲಲಿತಾ ಅವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ. ಇಂಥವರಿಗೆ ಮತ ನೀಡಬಾರದು’ ಎಂದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶಿವರಾಮು, ಎಚ್.ಕೆ. ಮಹೇಶ್, ಎಸ್.ಎಂ. ಆನಂದ್, ಸಿ.ಎಸ್. ಪುಟ್ಟೇಗೌಡ, ಶೇಷೇಗೌಡ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.