ADVERTISEMENT

ಯುವ ನಾಯಕನ ಹೊಸ ಪರ್ವ

ಕೆ.ಎಸ್.ಸುನಿಲ್
Published 28 ನವೆಂಬರ್ 2017, 8:35 IST
Last Updated 28 ನವೆಂಬರ್ 2017, 8:35 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಹಾಸನ: ಸಂಸದ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ಅವರನ್ನು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ದಿಢೀರ್ ನೇಮಕ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೆಲ ತಿಂಗಳ ಹಿಂದಷ್ಟೇ ಪ್ರಜ್ವಲ್, ‘ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ’ ಎನ್ನುವ ಬಾಂಬ್ ಸಿಡಿಸಿ ಹೊಸ ವಿವಾದ ಹುಟ್ಟು ಹಾಕಿದ್ದರು. ನಂತರ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.

ಇದಕ್ಕೆ ಪುಷ್ಟಿ ಎಂಬಂತೆ ತಾಯಿ ಭವಾನಿ ರೇವಣ್ಣ, ‘ಮುಂದಿನ ಚುನಾವಣೆಯಲ್ಲಿ ಮಗ ಪ್ರಜ್ವಲ್ ಸ್ಪರ್ಧೆ ಮಾಡುವುದು ಖಚಿತ. ಇದಕ್ಕೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ’ ಎಂದು ಬಹಿರಂಗ ಹೇಳಿಕೆ ನೀಡಿದ್ದರು.

ADVERTISEMENT

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಗೌಡರು ಮೊಮ್ಮಗನಿಗೆ ಪಟ್ಟ ಕಟ್ಟಿರುವುದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಜ್ವಲ್ ಗೆ ಈವರೆಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಆದರೂ, ಒಂದೊಂದು ಕಡೆ ಒಂದೊಂದು ರೀತಿಯ ಮಾತುಗಳನ್ನಾಡುವ ಮೂಲಕ ಪಕ್ಷದ ನಾಯಕರಿಗೆ ಹಾಗೂ ಕುಟುಂಬ ಸದಸ್ಯರಿಗೆ ಮುಜುಗರ ಉಂಟು ಮಾಡುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಹೊಣೆಗಾರಿಕೆ ವಹಿಸಲಾಗಿದೆಯೇ ಎಂಬ ಮಾತು ಕೇಳಿ ಬರುತ್ತಿದೆ.

ಮತ್ತೊಂದೆಡೆ ಪ್ರಜ್ವಲ್, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇರಾದೆಗಿಂತಲೂ ಮೊದಲು ಪಕ್ಷ ಸಂಘಟನೆ ಮಾಡಲಿ ಎನ್ನುವುದು ಗೌಡರ ಲೆಕ್ಕಚಾರ ಇರಬಹುದು. ಅದರ ಜೊತೆಯಲ್ಲೇ ಒಂದು ಜವಾಬ್ದಾರಿ ಅಂತ ನೀಡಿದರೆ, ಆತ ಮತ್ತಷ್ಟು ಪಕ್ವನಾಗುತ್ತಾನೆ. ಜವಾಬ್ದಾರಿ ಹೆಚ್ಚಾಗಲಿದೆ ಎಂಬುದು ಆ ಪಕ್ಷದ ನಾಯಕರ ಯೋಚನೆಯೂ ಇರಬಹುದು ಎಂದು ಹೇಳುವವರಿದ್ದಾರೆ.

ಈ ಬಗ್ಗೆ ಶಾಸಕರು ಹಾಗೂ ಜೆಡಿಎಸ್ ಮುಖಂಡರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ‘ದೊಡ್ಡವರು ನೇಮಕ ಮಾಡಿದ್ದಾರೆ. ಅದರ ಬಗ್ಗೆ ನಾವೇನೂ ಮಾತನಾಡುವುದಿಲ್ಲ’ ಎಂದಷ್ಟೇ ಹೇಳಿ ಜಾರಿಕೊಂಡರು. ‘ಪಕ್ಷದಲ್ಲಿ ಯುವಕರಿಗೆ ಹೊಣೆಗಾರಿಗೆ ನೀಡಬೇಕು ಎಂಬ ಮಾತುಗಳು ಕೇಳಿ ಬಂದ ಕಾರಣ ನೇಮಕ ಮಾಡಿರಬಹುದು’ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಹೇಳಿದರು.

ನೇಮಕ ವಿಚಾರ ಗೊತ್ತಿಲ್ಲ: ‘ಪುತ್ರ ಪ್ರಜ್ವಲ್ ರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ವಿಚಾರ ನನಗೇ ಗೊತ್ತೇ ಇಲ್ಲ’ ಎಂದು ಶಾಸಕ ಎಚ್.ಡಿ.ರೇವಣ್ಣ ಹಾರಿಕೆ ಉತ್ತರ ನೀಡಿದರು. ‘ಆ ಸುದ್ದಿ ಟಿ.ವಿ ಗಳಲ್ಲಿ ಪ್ರಸಾರವಾಯಿತಾ’ ಎಂದು ಮಾಧ್ಯಮದವರಿಗೇ ಮರು ಪ್ರಶ್ನೆ ಹಾಕಿದರು.

‘ನನಗೆ 18 ವರ್ಷದಿಂದ ದೇವೇಗೌಡರು ಯಾವ ಹುದ್ದೆ ನೀಡಿಲ್ಲ. ಪಕ್ಷ ಸಂಘಟನೆ ಮಾಡಲಿ ಎಂಬ ಉದ್ದೇಶದಿಂದ ಆತನಿಗೆ ಜವಾಬ್ದಾರಿ ನೀಡಿರಬಹುದು. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಕುರಿತು ನನಗೆ ಮಾಹಿತಿ ಇಲ್ಲ’ ಎಂದು ಉತ್ತರಿಸಿದರು.

ನಾನೇನು ಮಾತನಾಡುವುದಿಲ್ಲ ‘ಪ್ರಜ್ವಲ್ ರನ್ನು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ’ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹೇಳಿದರು. ‘ಆ ಬಗ್ಗೆ ನಾನು ಈಗ ಏನನ್ನೂ ಮಾತನಾಡುವುದಿಲ್ಲ. ನಾನು ಜಿಲ್ಲಾ ಪಂಚಾಯ್ತಿಗೆ ಹೋಗಬೇಕು’ ಎಂದಷ್ಟೇ ಹೇಳಿ ಹೊರ ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.