ADVERTISEMENT

ರಕ್ಷಣೆಗಾಗಿ ಅರ್ಚಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 5:45 IST
Last Updated 21 ಸೆಪ್ಟೆಂಬರ್ 2011, 5:45 IST

ಹಾಸನ: `ಸುಳ್ಳು ಆರೋಪಗಳನ್ನು ಹೊರಿಸಿ ತನ್ನ ಮತ್ತು ಗ್ರಾಮಸ್ಥರ ವಿರುದ್ದ ದೂರು ದಾಖಲಿಸಿರುವ ಬೂವನಹಳ್ಳಿ ಚನ್ನಕೇಶವ ಸ್ವಾಮಿ ದೇವಸ್ಥಾನದ ಮಾಜಿ ಅರ್ಚಕ ಕೇಶವ ಅಯ್ಯಂಗಾರ ಅವರನ್ನು ಗಡೀಪಾರು ಮಾಡಬೇಕು~ ಎಂದು ಮಾಜಿ ಶಾಸಕ ಬಿ.ವಿ. ಕರೀಗೌಡ ಒತ್ತಾಯಿಸಿದ್ದಾರೆ.

ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, `ಕೇಶವ ಅಯ್ಯಂಗಾರ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಕಬಳಿಸಲು ಪ್ರಯತ್ನಿಸಿದ್ದಲ್ಲದೆ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಮಾಧ್ಯಮದವರಿಗೂ ತಪ್ಪು ಮಾಹಿತಿ ನೀಡಿ ಜನರಿಗೆ ಗ್ರಾಮಸ್ಥರ ಮೇಲೆ ಸಂದೇಹ ಮೂಡಿವಂತೆ ಮಾಡಿದ್ದಾರೆ ಎಂದರು.

ಪ್ರಕರಣದ ಹಿನ್ನೆಲೆಯನ್ನು ಬಿಟ್ಟಿಟ್ಟ ಅವರು, `ಕೇಶವ ಅಯ್ಯಂಗಾರ ಪಾರಂಪರಿಕವಾಗಿ ಅರ್ಚಕರಾಗಿಲ್ಲ. ಅವರ ತಂದೆ ಇಲ್ಲಿಯವರಲ್ಲ. 1970ರ ಜುಲೈ 1ರಿಂದ ಕೇಶವ ಅಯ್ಯಂಗಾರ್ ಇಲ್ಲಿ ಅರ್ಚಕರಾಗಿದ್ದಾರೆ.

ಗ್ರಾಮದ ಬಿ.ಎಸ್.ಎಸ್.ಎನ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದ ಅವರ ವಿರುದ್ಧ ಹಣ ದುರ್ಬಳಕೆಯ ಆರೋಪವೂ ಬಂದು, ಬಂಧನದ ವಾರಂಟ್ ಸಹ ಹೊರಡಿಸಲಾಗಿತ್ತು. ದೇವಸ್ತಾನಕ್ಕೆ ಸಂಬಂಧಿಸಿದ ಸುಮಾರು 16 ಎಕರೆ ಭೂಮಿ ಇತ್ತು. ಅದನ್ನು ಸುತ್ತಲಿನ ರೈತರೇ ಉಳುಮೆ ಮಾಡಿ, ದವಸಧಾನ್ಯ, ಹಾಲು ಮೊಸರು ಮುಂತಾದವುಗಳನ್ನು ದೇವಸ್ಥಾನಕ್ಕೆ ಮತ್ತು ಅರ್ಚಕರಿಗೆ ನೀಡುತ್ತ ಬಂದಿದ್ದರು.

1972ರಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ಬಂದಾಗ ಊರವರೆಲ್ಲರೂ ಸೇರಿ ದೇವಸ್ಥಾನದ ಜಮೀನನ್ನು ನಾವು ಬರೆಸಿಕೊಳ್ಳುವುದು ಬೇಡ ಎಂದು ತಿರ್ಮಾನಿಸಿದ್ದರು. ಆದರೆ ಕೇಶವ ಅಯ್ಯಂಗಾರ್ ಊರವರಿಗೆ ತಿಳಿಯದಂತೆ ತಂದೆ ಶೇಷಾದ್ರಿ ಅಯ್ಯಂಗಾರ್ ಹೆಸರಿನಲ್ಲಿ ಅರ್ಜಿ ಹಾಕಿ ಭೂಮಿಯ ಖಾತೆ ಮಾಡಿಸಿಕೊಂಡಿದ್ದರು.

ಬಿಎಸ್‌ಎಸ್‌ಎನ್ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಇವರನ್ನು ಬಂಧಿಸಲು ಪೊಲೀಸರು ಬಂದಾಗ, `ನನ್ನ ಪೂರ್ವಜರ ಆಸ್ತಿ ಮಾರಾಟ ಮಾಡಿ ಸಾಲ ತೀರಿಸುತ್ತೇನೆ~ ಎಂದರು. ಪೂರ್ವಿಕರ ಆಸ್ತಿ ಎಂದು ದೇವಸ್ಥಾನದ ಆಸ್ತಿಯನ್ನು ತೋರಿಸಿದಾಗಲೇ ಇವರು ದೇವಸ್ಥಾನದ ಜಮೀನಿಗೆ ಖಾತೆ ಮಾಡಿಸಿಕೊಂಡ ವಿಚಾರ ಊರವರಿಗೆ ತಿಳಿದುಬಂದಿತ್ತು.
 
ಕೊನೆಗೂ ಮಾನವೀಯತೆ ಹಿನ್ನೆಲೆಯಲ್ಲಿ ಐದು ಎಕರೆ ಭೂಮಿ ಮಾರಾಟ ಮಾಡಿ ಸಾಲ ತೀರಿಸಲಾಗಿತ್ತು. ಇದಾದ ಬಳಿಕ, 1972ರಲ್ಲಿ ಉಳಿದ ಭೂಮಿಯನ್ನು ಅವರು ಚನ್ನಕೇಶವ ಟ್ರಸ್ಟ್‌ಗೆ ಮರಳಿಸಿ ನೋಂದಣಿಯನ್ನೂ ಮಾಡಿಸಿದ್ದರು. 1977-78ರಲ್ಲಿ ಅದೇ ಜಮೀನನ್ನು ಊರವರಿಗೆ ತಿಳಿಸದೆಯೇ ಮತ್ತೆ ತಮ್ಮ ಹೆಸರಿಗೆ ಮಾಡಿಸಿಕೊಂಡರು.

2002ರಲ್ಲಿ ಊರವರಿಗೆ ಈ ವಿಚಾರ ತಿಳಿದಾಗ ಮತ್ತೆ ಜಮೀನನ್ನು ಟ್ರಸ್ಟ್‌ಗೆ ಕೊಡುವುದಾಗಿ ನೋಟರಿ ಮುಂದೆ ಬರೆದು ಕೊಟ್ಟರು. ಇದಾದ ಬಳಿಕ ಮತ್ತೆ ವಂಚನೆಗೆ ಮುಂದಾದ ಅರ್ಚಕರು ಈಗ ಸುಮಾರು ಐದು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನಿನ ಸ್ಕೆಚ್ ತಯಾರಿಸಿ ಊರವರಿಗೆ ಮಾಹಿತಿ ನೀಡದೆಯೇ ಮಾರಾಟ ಮಾಡುವ ಸಂಚು ರೂಪಿಸಿದರು. ಯಾವುದೋ ಕಾರಣದಿಂದ ಈ ವಿಚಾರ ಹೊರಗೆ ಬಂದು ಅವರನ್ನು ಕೇಳಿದರೆ ಉಡಾಫೆಯ ಉತ್ತರ ನೀಡಿದರು.

ಇದಾದ ನಂತರ ಗ್ರಾಮಸ್ಥರೆಲ್ಲ ಸೇರಿ 2010ರ ಮಾರ್ಚ್ 19ರಂದು `ನಮಗೆ ಈ ಅರ್ಚಕರು ಬೇಡ. ಬೇರೆ ಅರ್ಚಕರನ್ನು ನೇಮಕ ಮಾಡಬೇಕು~ ಎಂದು ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ನೀಡಿದರು. 2011ರ ಫೆಬ್ರುವರಿ 1ರಂದು ಹೊಸ ಅರ್ಚಕರ ನೇಮಕವಾಗಿದೆ. ಪ್ರಸಕ್ತ ಈ ವಿಚಾರ ಹೈಕೋರ್ಟ್‌ನಲ್ಲಿದೆ ಎಂದು ಕರೀಗೌಡ ತಿಳಿಸಿದರು.

ಕೇಶವ ಅಯ್ಯಂಗಾರ ಅವರಿಗೆ ಗ್ರಾಮದಲ್ಲಿ ಸ್ವಂತ ಮನೆ ಇದ್ದು, ಅವರು ಅದರಲ್ಲೇ ವಾಸಿಸುತ್ತಿದ್ದಾರೆ. ಆದರೆ ಅಲ್ಲಿಯೇ ಸಮೀಪದಲ್ಲಿ ದೇವಸ್ಥಾನಕ್ಕೆ ಸೇರಿದ ಮನೆಯೂ ಇದೆ. ಅದಕ್ಕೆ ಅವರು ಬೀಗ ಹಾಕಿದ್ದಾರೆ.

ಇದರಿಂದಾಗಿ ಹೊಸ ಅರ್ಚಕರು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಂತಾಗಿದೆ. ಬೀಗ ತೆಗೆದು ಮನೆಯನ್ನು ಹೊಸ ಅರ್ಚಕರಿಗೆ ಕೊಡಿ ಎಂದು ಕೇಳಲು ಮೊನ್ನೆ ಗ್ರಾಮಸ್ಥರು ಹೋದಾಗ ಅರ್ಚಕ ಹಾಗೂ ಅವರ ಪುತ್ರ ಮಾರಕಾಸ್ತ್ರಗಳನ್ನು ಹಿಡಿದು ಬೆದರಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.
 
ಸ್ವಲ್ಪ ಕಲ್ಲು ತೂರಾಟವೂ ಆಗಿದೆ. ಆದರೆ ಹಾನಿಯಾಗಿರುವುದು ದೇವಸ್ಥಾನಕ್ಕೆ ಸಂಬಂಧಿಸಿದ ಮತ್ತು ಯಾರೂ ವಾಸವಿಲ್ಲದ ಮನೆಯೇ ಹೊರತು ಅವರ ಮನೆಯಲ್ಲ. ಪೊಲೀಸರಿಗೆ ಅವರು ಸುಳ್ಳು ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಪೊಲೀಸರೂ ಸಹ ಪೂರ್ವಾಪರ ವಿಚಾರ ಮಾಡದೆ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತೇನೆ. ಗ್ರಾಮಕ್ಕೆ ಈ ಅರ್ಚಕರು ಬೇಡ ಎಂದು ಎಲ್ಲರೂ ಲಿಖಿತ ಮನವಿ ಕೊಟ್ಟಾಗಿದೆ. ಈ ಅರ್ಚಕರನ್ನು ಕೂಡಲೇ ಗಡೀಪಾರು ಮಾಡಲೇಬೇಕು~ ಎಂದು ಕರೀಗೌಡ ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸ್ವಾಮಿಗೌಡ, ಗ್ರಾಮಸ್ಥರಾದ ದೇವೇಗೌಡ, ಶಿವರಾಮೇಗೌಡ, ಚಿನ್ನಾಚಾರಿ, ಚಿಕ್ಕಲಿಂಗಯ್ಯ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಅರ್ಚಕರ ಪ್ರತಿಭಟನೆ
ಅತ್ತ ಅರ್ಚಕ ಕೇಶವ ಅಯ್ಯಂಗಾರ್ ವಿರುದ್ಧ ಕರೀಗೌಡ ಕಿಡಿ ಕಾರುತ್ತಿದ್ದರೆ ಇತ್ತ ಅರ್ಚಕರೆಲ್ಲ ಸೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.

`ಶನಿವಾರ ರಾತ್ರಿ ವೇಳೆಯಲ್ಲಿ ಮನೆಗೆ ಬಂದ ಕರೀಗೌಡ ಬೆಂಬಲಿಗರು ಮನೆಯವರನ್ನು ಬೆದರಿಸಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನೂ ನಾಶ ಮಾಡಿದ್ದಾರೆ. ಕಲ್ಲೆಸೆದು ಮನೆಯ ಹಂಚುಗಳನ್ನು ಒಡೆದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು~ ಎಂದು ಅರ್ಚಕರು ಆಗ್ರಹಿಸಿದರು.

`ಭೂ ಸುಧಾರಣೆ ಆಯ್ದೆಯಡಿ ಕೇಶವ ಅಯ್ಯಂಗಾರ್ ಅವರ ಕುಟುಂಬಕ್ಕೆ ದೇವಸ್ಥಾನದ ಭೂಮಿಯನ್ನು ನೀಡಲಾಗಿತ್ತು. ಅಲ್ಲಿ ಬೆಳೆ ಬೆಳೆದು ಅವರು ಜೀವನ ಸಾಗಿಸುತ್ತಿದ್ದರು. ಈಚೆಗೆ ಇಲ್ಲಿಯ ಭೂಮಿಗೆ ಚಿನ್ನದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ಕಬಳಿಸುವ ಉದ್ದೇಶದಿಂದ ಇವರ ಕುಟುಂಬಕ್ಕೆ ಬೆದರಿಕೆ ಒಡ್ಡಿ, ಅವರನ್ನು ಓಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಅರ್ಚಕರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.