ಆಲೂರು: ತಾಲ್ಲೂಕು ಅರೆಮಲೆನಾಡು ಪ್ರದೇಶವಾಗಿದ್ದು, ಒಮ್ಮೆ ಕೃಪೆ ತೋರಿದ ವರುಣ ಮತ್ತೆ ಇತ್ತ ಕೃಪೆ ತೊರದಿರುವುದಿಂದ ಕೃಷಿ ಚಟುವಟಿಕೆಗಳು ಗರಿ ಗೆದರಿಲ್ಲ. ಜಮೀನುಗಳನ್ನು ಉಳುಮೆ ಮಾಡಿಕೊಂಡು ಬಿತ್ತನೆ ಮಾಡಲು ಅನ್ನದಾತರು ಮುಗಿಲಿನೆಡೆಗೆ ಮುಖಮಾಡಿದ್ದಾರೆ.
ತಾಲ್ಲೂಕಿನ ವಾಟೆಹೊಳೆ ಜಲಾಶಯದ ನೀರಿನ ಮಟ್ಟ 961.66 ಮೀಟರ್ ಇದ್ದು, ಕಳೆದ ವರ್ಷಕ್ಕಿಂತ ಸುಮಾರು 0.35 ಟಿಎಂಸಿ ನೀರು ಕಡಿಮೆ ಇರುತ್ತದೆ. ಏಪ್ರಿಲ್‌ನಲ್ಲಿ ಮಳೆ ಬಿದ್ದಾಗ ಬಿತ್ತಿದ್ದ ಬೀಜಗಳು ಮೊಳಕೆಯೊಡೆದು ಚಿಗುರಿದ್ದವು. ಆದರೆ ಆಗಿನಿಂದ ಈವರೆಗೆ ಮಳೆ ಬಾರದಿದ್ದರಿದ ಬೆಳೆಗಳು ಒಣಗಲು ಪ್ರಾರಂಭವಾಗಿದೆ. ಪೈರುಗಳನ್ನು ಕಾಪಾಡಿಕೊಳ್ಳಲು ಕೊಳವೆ ಬಾವಿ ಇರುವ ಕೆಲ ರೈತರು ಸ್ಪ್ರಿಂಕ್ಲರ್ ಮೂಲಕ ಹೊಲಗಳಿಗೆ ನೀರು ಹಾಯಿಸುತ್ತಿದ್ದಾರೆ.
ರೈತರು ತಂದಿಟ್ಟುಕೊಂಡಿದ್ದ ಬಿತ್ತನೆ ಆಲೂಗೆಡ್ಡೆ ಚೀಲಗಳಲ್ಲಿ ಮೊಳಕೆ ಒಡೆದಿವೆ, ಕರಗಿಯೂ ಹೋಗಿದೆ. ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಕಸಬ ಹೋಬಳಿ ಹೊರತುಪಡಿಸಿ ಪಾಳ್ಯ, ಕುಂದೂರು, ಕೆ.ಹೊಸಕೋಟೆ ಹೋಬಳಿಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಕಾಫಿ ಗಿಡಳಿಗೆ ಗೊಬ್ಬರ ಹಾಕಲು ಮಳೆ ಬೇಕಾಗಿದೆ. ಆದರೆ ವರುಣ ಮಾತ್ರ ಮುನಿಸಿಕೊಂಡಂತಿದೆ.
ಪಿ.ಎಚ್.ಗುಲಾಂ ಸತ್ತಾರ್
ಧರೆಗಿಳಿಯದ ವರ್ಷಧಾರೆ: ರೈತರಲ್ಲಿ ಹರ್ಷ `ಮರೆ~
ಅರಸೀಕೆರೆ: ತಾಲ್ಲೂಕಿನಲ್ಲಿ ಈವರೆಗೂ ಮುಂಗಾರು ಪ್ರವೇಶಿಸದಿರುವುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಮೂರ‌್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ, ತಂಗಾಳಿ ಬೀಸುತ್ತಿದೆಯೇ ಹೊರತು ಮಳೆ ಬಿದ್ದಿಲ್ಲ. ತಾಲ್ಲೂಕಿನಲ್ಲಿ ಈವರೆಗೆ 20,824 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಹೆಸರು-10,050 ಹೆಕ್ಟೇರ್, ಮುಸುಕಿನ ಜೋಳ-850, ಹೈಬ್ರಿಡ್ ಜೋಳ-1750, ಅಲಸಂದೆ -4500, ಉದ್ದು- 2250, ಎಳ್ಳು-1485, ತೊಗರಿ- 400, ಸೂರ್ಯ ಕಾಂತಿ- 285, ಹರಳು-120, ಹತ್ತಿ- 21 ಹೆಕ್ಟೆರ್‌ನಲ್ಲಿ ಬಿತ್ತನೆಯಾಗಿದೆ. ಪೈರುಗಳು ಒಣಗುತ್ತಿವೆ.
ರೈತರು ಬಿತ್ತನೆಗೆ ಹೊಲಗಳನ್ನು ಹದಗೊಳಿಸಿಕೊಂಡು ಮುಗಿಲಿನತ್ತ ಮುಖಮಾಡಿ ಕುಳಿತಿದ್ದಾರೆ. ಕೃಷಿ ಇಲಾಖೆಯವರು ಬಿತ್ತನೆ ಬೀಜ ವಿತರಿಸುತ್ತಿದ್ದರೂ ರೈತರು ಖರೀದಿಗೆ ಅಸಕ್ತಿ ತೋರುತ್ತಿಲ್ಲ. ಏಪ್ರಿಲ್ ಅಂತ್ಯದಲ್ಲಿ ಬಿದ್ದ ಮಳೆಗೆ ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದರು. ಕಳೆದ ಒಂದು ತಿಂಗಳಿನಿಂದ ಮತ್ತೆ ಮಳೆ ಇತ್ತ ಸುಳಿಯದಿರುವುದರಿಂದ ಬೆಳೆಗಳು ಬಾಡುತ್ತಿವೆ. ಬೀಜ, ಗೊಬ್ಬರ, ಕೂಲಿ... ಹೀಗೆ ಹಣ ಸುರಿದಿರುವ ಅನ್ನದಾತ ಆತಂಕಗೊಂಡಿದ್ದಾನೆ.
ಮಾಡಾಳು ಶಿವಲಿಂಗಪ್ಪ
ಮಳೆರಾಯನ ಮುನಿಸು: ಕಮರಿತು ರೈತನ ಕನಸು
ಬಾಣಾವರ: ದಶಕದಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ಹೋಬಳಿಯ ರೈತರು ಜೂನ್ ಬಂದರೂ ಮುಂಗಾರು ಪ್ರವೇಶಿಸದಿರುವುದರಿಂದ ಸಂಕಷ್ಟಕೀಡಾಗಿದ್ದಾರೆ.
ಪ್ರಾರಂಭದಲ್ಲಿ ಬಿದ್ದ ಉತ್ತಮ ಮಳೆಗೆ ಬಾಣಾವರ ಹೋಬಳಿಯ ರೈತರು ಸೂರ್ಯಕಾಂತಿ, ಎಳ್ಳು, ಹೆಸರು, ಜೋಳ, ಉದ್ದು, ಹರಳುಬೆಳೆ ಬಿತ್ತಿದ್ದರು. ಆದರೆ ವರುಣನ ಮುನಿಸಿನಿಂದ ಈ ಬೆಳೆಗಳು ಬಾಡುತ್ತಿವೆ.
ಮಳೆರಾಯ ಇತ್ತ ಸುಳಿಯದಿರುವುದರಿಂದ ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಬೆಳೆಗಳು ಒಣಗಲಾರಂಭಿಸಿದ್ದು, ನಿತ್ಯ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ. ವರುಣ ಕೃಪೆ ತೋರದಿರುವುದರಿಂದ ಬಿತ್ತನೆಗೆ ಭೂಮಿ ಹದಗೊಳಿಸಿಕೊಂಡಿದ್ದ ರೈತರು ದಾರಿ ಕಾಣದೆ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.
ಕಳೆದ ವರ್ಷ ಸರಿಯಾಗಿ ಮಳೆಯಾಗದಿದ್ದರಿಂದ ಕೆರೆ ಕಟ್ಟೆಗಳ್ಲ್ಲೆಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಹೋಬಳಿಯ ಬಹುತೇಕ ಕೆರೆ ಕಟ್ಟೆಗಳ ಒಡಲುಗಳು ನೀರಿಲ್ಲದೆ ಬರಿದಾಗಿದೆ. ಹೋಬಳಿಯದ್ಯಾಂತ ಮಳೆಯ ಅಭಾವದಿಂದ ರೈತರು ಕೃಷಿ ಬಿಟ್ಟು ಪಟ್ಟಣಗಳತ್ತ ಮುಖ ಮಾಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ.
-ಪ್ರಸನ್ನಕುಮಾರ್‌ಸುರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.