ADVERTISEMENT

ಸಂಚಾರಕ್ಕೆ ಮುಕ್ತವಾಗುವುದೇ ರಿಂಗ್‌ ರಸ್ತೆ?

ಯು.ಉದಯ
Published 2 ಡಿಸೆಂಬರ್ 2013, 8:44 IST
Last Updated 2 ಡಿಸೆಂಬರ್ 2013, 8:44 IST

ಹಾಸನ: ಎರಡು ವರ್ಷದ ಹಿಂದೆ ಹಿರೀಸಾವೆ ಸಮೀಪ ಬಂದು ನಿಂತಿದ್ದ ಮಂಗಳೂರು– ಬೆಂಗಳೂರು ನಾಲ್ಕು ಲೇನ್‌ ರಸ್ತೆ ಕಾಮಗಾರಿ ಈಗ ಚನ್ನರಾಯಪಟ್ಟಣ ದಾಟಿ ಹಾಸನದವರೆಗೂ ಬಂದಾಗಿದೆ. ಡಿಸೆಂಬರ್‌ ಕೊನೆಯ ವೇಳೆಗೆ ಕಾಮಗಾರಿಯೇ ಪೂರ್ಣಗೊಳ್ಳುವ ಭರವಸೆ ಮೂಡಿದೆ. ಆದರೆ, ಸುಮಾರು 12 ವರ್ಷ ಹಿಂದೆ ಆರಂಭವಾಗಿ ಅರ್ಧಕ್ಕೆ ನಿಂತಿರುವ ಹಾಸನದ ರಿಂಗ್‌ರಸ್ತೆ ಕಾಮಗಾರಿ ಒಂದಿಂಚೂ ಮುಂದೆ ಹೋಗಿಲ್ಲ.

ರಿಂಗ್‌ ರಸ್ತೆಯ ವಿಚಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪ್ರಸ್ತಾಪ ವಾಗಿದೆ. ವಿಧಾನ ಪರಿಷತ್‌ ಸದಸ್ಯ ಪಟೇಲ್‌ ಶಿವರಾಮ್‌ ಈ ಬಗ್ಗೆ ಕೇಳಿದ ಪ್ರಶ್ನೆಗೆ ‘ಕಾಮಗಾರಿ ಪೂರ್ಣಗೊಳಿಸಲು ನಾವು ಬದ್ಧ, ಬೇಕಾದಷ್ಟು ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು, ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನೂ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಉತ್ತರ ಹಾಸನದ ಜನತೆಗೆ ಖಂಡಿತವಾಗಿಯೂ ಸಮಾಧಾನ ನೀಡಲಾರದು. ಯಾಕೆಂದರೆ ಇದೇ ಪಟೇಲ್‌ ಶಿವರಾಮ್‌ ಹಿಂದೆಯೂ ಒಂದೆರಡು ಬಾರಿ ಈ ಪ್ರಶ್ನೆಯನ್ನು ವಿಧಾನಪರಿಷತ್ತಿನಲ್ಲಿ ಎತ್ತಿದ್ದಾರೆ. ಇದೇ ಉತ್ತರ ಆಗಲೂ ಲಭಿಸಿದೆ. ವ್ಯತ್ಯಾಸ ವೆಂದರೆ ಈ ಬಾರಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ.ಎಚ್‌.ಸಿ. ಮಹದೇವಪ್ಪ ಉತ್ತರ ನೀಡಿದ್ದಾರೆ ಅಷ್ಟೇ.

ರಿಂಗ್‌ ರಸ್ತೆ ಕಾಮಗಾರಿ ಮುಗಿಸಿಲ್ಲ ಎಂದು ಇದೇ ಮೊದಲ ಬಾರಿ ವರದಿ ಬಂದಿದ್ದಲ್ಲ. ಎಲ್ಲ ಪತ್ರಿಕೆಗಳೂ ಹಲವು ಬಾರಿ ಇದನ್ನೇ ಬರೆದಿವೆ. ಜಿಲ್ಲೆಗೆ ಬಂದ ಸಚಿವರಿಗೆಲ್ಲ ಜನರು ಈ ಒತ್ತಾಯ ಮಾಡಿದ್ದಾರೆ. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನತಾ ದರ್ಶನದಲ್ಲೂ ಮನವಿ ಸಲ್ಲಿಕೆಯಾಗಿದೆ. ಆದರೆ, ರಸ್ತೆ ಕಾಮಗಾರಿ ಮಾತ್ರ ಮುಂದೆ ಸಾಗುತ್ತಿಲ್ಲ.

ಈ ಒಂದು ರಸ್ತೆ ಪೂರ್ಣಗೊಂಡರೆ ನಗರದ ಜನರಿಗೆ ಎಷ್ಟು ನೆಮ್ಮದಿ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿ.ಎಂ. ರಸ್ತೆಯ ವಾಹನ ದಟ್ಟಣೆ ಮತ್ತು ದಿನನಿತ್ಯ ಎನ್‌.ಆರ್‌. ವೃತ್ತದಲ್ಲಿ ಉಂಟಾಗುವ ಟ್ರಾಫಿಕ್‌ ಸಮಸ್ಯೆ ತುಂಬ ಮಟ್ಟಿಗೆ ನಿಯಂತ್ರಣವಾಗುತ್ತದೆ. ಬೆಂಗಳೂರು ಕಡೆಯಿಂದ ಬಂದು ಬೇಲೂರು– ಹಳೇಬೀಡಿನತ್ತ ಹೋಗುವವರು ಪಟ್ಟಣ ಪ್ರವೇಶಿಸದಂತೆ ನೆಮ್ಮದಿಯಾಗಿ ಹೋಗ ಬಹುದು. ಇತ್ತ ವಿದ್ಯಾನಗರ, ರವೀಂದ್ರನಗರ ಮುಂತಾದ ಭಾಗಗಳಿಂದ ಸಕಲೇಶಪುರದತ್ತ ಹೋಗುವವರೂ ಬಿ.ಎಂ. ರಸ್ತೆಯ ಟ್ರಾಫಿಕ್‌ ಸಮಸ್ಯೆಯಿಂದ ಮುಕ್ತಿ ಪಡೆಯುತ್ತಾರೆ.

ಬಿ.ಎಂ. ರಸ್ತೆ ಮೇಲಿನ ಒತ್ತಡ ಕಡಿಮೆಯಾದರೆ ಜನರು ನೆಮ್ಮದಿಯಿಂದ ಓಡಾಡುತ್ತಾರೆ ಎಂಬುದು ನಮ್ಮ ಜನಪ್ರತಿನಿಧಿಗಳಿಗೂ ಗೊತ್ತಿದೆ. ಆದರೆ ಬಾಕಿ ಉಳಿದಿರುವ ನಲ್ಕೈದು ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇದೊಂದೇ ಅಲ್ಲ, ಕಾಮಗಾರಿ ಪೂರ್ಣಗೊಳ್ಳ ದಿರುವುದರಿಂದ ಈ ರಸ್ತೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿ, ಸಂಜೆಯಾಗುತ್ತಿದ್ದಂತೆ ಈ ರಸ್ತೆಯ ಅಕ್ಕಪಕ್ಕದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ.

ಅಕ್ಕಪಕ್ಕದ ಬಡಾವಣೆಗಳ ಜನರು ಸಂಜೆಯಾದರೆ ಮನೆಯಿಂದ ಆಚೆ ಬರಲು ಭಯಪಡುತ್ತಾರೆ. ಕಾಮಗಾರಿ ಪೂರ್ಣ ಗೊಂಡರೆ ಈ ಸಮಸ್ಯೆಯೂ ಬಗೆಹರಿಯ ಬಹುದು. ಆದರೆ, ನಮ್ಮ ಪ್ರತಿನಿಧಿಗಳು ಈ ರಸ್ತೆಯನ್ನೇ ಮರೆತವರಂತೆ ಈಗ ಔಟರ್‌ ರಿಂಗ್‌ ರಸ್ತೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಗರದಿಂದ ಆಚೆ, ಕೃಷಿ ಮಾಡಿಕೊಂಡು ನೆಮ್ಮದಿಯಿಂದಿದ್ದ ಜನರಿಂದ ಭೂಮಿಯನ್ನು ಕಸಿದು, ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿ, ನಾಲ್ಕು ಲೇನ್‌ ರಸ್ತೆ ನಿರ್ಮಿಸುವ ಕೆಲಸ ಕಣ್ಣು ಮುಚ್ಚಿ ತೆರೆಯುವುದರೊಳಗೆ ನಡೆಯುತ್ತದೆ. ರಸ್ತೆಗಾಗಿ ಭೂಮಿಕೊಟ್ಟವರು ಅದೇ ರಸ್ತೆಯಲ್ಲಿ ಹಣ ಕೊಟ್ಟು ಸಂಚರಿಸುವ ಸ್ಥಿತಿ ಬಂದಿದೆ. ಆದರೆ, ನಗರದ ಜನರಿಗೆ ಒಂದಿಷ್ಟು ನೆಮ್ಮದಿ ಕೊಡಬಲ್ಲಂಥ ರಸ್ತೆ ಕಾಮಗಾರಿ ಒಂದೂವರೆ ದಶಕವಾಗುತ್ತ ಬಂದರೂ ಪೂರ್ಣಗೊಳ್ಳದಿದ್ದರೆ ಅದಕ್ಕೆ ಯಾರನ್ನು ಹೊಣೆಮಾಡಬೇಕು?. 

ಅರ್ಧಕ್ಕೆ ನಿಂತಿರುವ ರಿಂಗ್‌ ರಸ್ತೆ ಕಾಮಗಾರಿ ಈಗ ಆರಂಭಿಸಿದರೂ ಅದು ಪೂರ್ಣಗೊಳ್ಳು ವುದರೊಳಗೆ ಆಗಿರುವ ರಸ್ತೆಯೂ ಗಬ್ಬೆದ್ದು ಹೋಗುತ್ತದೆ. ಈಗಾಗಲೇ ರಸ್ತೆಯಲ್ಲಿ ಹಲವೆಡೆ ದೊಡ್ಡ ಗಾತ್ರದ ಗುಂಡಿಗಳೇ ಬಿದ್ದಿವೆ. ಆ ಗುಂಡಿಗಳನ್ನಾದರೂ ಮುಚ್ಚಿಸಿದರೆ ಇರುವ ರಸ್ತೆಯನ್ನಾದರೂ ಜನರು ನೆಮ್ಮದಿಯಿಂದ ಬಳಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.