ಅರಸೀಕೆರೆ: ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆಯೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಹಿಸುವ ಸಂದೇಶವಾಹಕಗಳಾಗಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಿ.ಎಸ್. ರಾಮಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಕಸಾಪ ಸೋಮವಾರ ಆಯೋಜಿಸಿದ್ದ 5ನೇ ತಾಲ್ಲೂಕು ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನಗಳು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಂಥ ಸಾಹಿತ್ಯದ ಚರ್ಚೆ ಹಾಗೂ ರಚನೆಗೆ ಪ್ರೇರಣೆ ಡುವಂತಾಗಬೇಕು. ಲೈಂಗಿಕ ದೌರ್ಜನ್ಯ, ಶೋಷಣೆ, ಕಿರುಕುಳ ಮುಂತಾದವುಗಳಿಂದ ಮಹಿಳೆಯರನ್ನು ರಕ್ಷಿಸಲು ಪ್ರಬಲ ಕಾನೂನು ಜಾರಿಯಾಗಲು ಸಮ್ಮೇಳನ ವೇದಿಕೆಯಾಗಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನಗಳು ಕೇವಲ ಹಬ್ಬ, ಜಾತ್ರೆಗಳಾಗದೆ ಕನ್ನಡ ಭಾಷೆ, ನೆಲ, ಜಲಗಳೊಂದಿಗೆ ಸಂಬಂಧ ಬೆಳೆಸಬೇಕು. ರಾಜಕೀಯ ದುರುದ್ದೇಶ ಇಲ್ಲದ ಸ್ಪಷ್ಟ ಸಾಹಿತ್ಯ ಚಿಂತನೆಗಳಿಗೆ ವೇದಿಕೆಯಾಗಬೇಕು. ಜಾತಿ, ಧರ್ಮಗಳ ಮೇರೆ ಮೀರಿ ಭಾಷೆ ಬೆಳೆಯಬೇಕು ಎಂದು ಆಶಿಸಿದರು.
ಶಾಸಕ ಕೆ.ಎಂ ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಸಾಹಿತ್ಯ ರಾಜಾಶ್ರಯದ ಗದ್ದುಗೆ ಏರಿತ್ತು. ಆದರೆ ಇಂದು ಸಾಹಿತ್ಯ ಜನ ಸಾಮಾನ್ಯರ ಹೃದಯ ತಟ್ಟುತ್ತಿದೆ ಎಂದರು. ಸಮ್ಮೇಳನ ಅಧ್ಯಕ್ಷ ರಾಮಸ್ವಾಮಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.