ADVERTISEMENT

ಹಣಕಾಸು ಇಲಾಖೆಯಲ್ಲಿ ಶಿಸ್ತು ಇಲ್ಲ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 10:35 IST
Last Updated 9 ಫೆಬ್ರುವರಿ 2011, 10:35 IST

ಹಾಸನ: ‘ರಾಜ್ಯದ ಹಣಕಾಸು ಇಲಾಖೆಯಲ್ಲಿ ವಿತ್ತೀಯ ಶಿಸ್ತು ಇಲ್ಲದೆ ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಆರೋಪಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ‘ಹಣಕಾಸು ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿದು, ಹಣಕಾಸು ಸಚಿವರ ಆಣತಿಯಂತೆ ವರ್ತಿಸುತ್ತಿದೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳೆಲ್ಲ ಕುಂಠಿತಗೊಂಡಿವೆ’ ಎಂದರು.

ಲೋಕೋಪಯೋಗಿ ಇಲಾಖೆಗೆ ಸರ್ಕಾರ 1200 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಕಳೆದ ಬಾರಿ ಬಜೆಟ್ ಮಂಡಿಸುವಾಗ ಖಜಾನೆಯಲ್ಲಿ ಏಳು ಸಾವಿರ ಕೋಟಿ ರೂಪಾಯಿ ಇದೆ ಎಂದು ಸಚಿವರು ಹೇಳಿದ್ದರು. ಹಣ ಇದ್ದರೆ ಲೋಕೋಪಯೋಗಿ ಇಲಾಖೆಯ ಬಿಲ್‌ಗಳನ್ನು ಯಾಕೆ ಪಾವತಿ ಮಾಡಿಲ್ಲ ಎಂದು ಸಚಿವರು ಉತ್ತರಿಸಬೇಕು. ಈಚೆಗೆ ನಡೆದ ಸಾರ್ವಜನಿಕ ಹಣಕಾಸು ಸಮಿತಿಯ ಸಭೆಯಲ್ಲೂ ನಾನು ಈ ಪ್ರಶ್ನೆ ಎತ್ತಿದ್ದೇನೆ ಎಂದು ರೇವಣ್ಣ ತಿಳಿಸಿದರು.

‘ವಿವಿಧ ಇಲಾಖೆಗಳಿಗೆ ಸರ್ಕಾರ ನೀಡಿರುವ ಹಣದಲ್ಲಿ ಶೇ 30 ರಿಂದ 40ರಷ್ಟು ಹಣ ಖರ್ಚಾಗದೆ ಉಳಿದಿದೆ. ಆದರೆ ಬೇಕಾದ ಇಲಾಖೆಗಳಿಗೆ ನೀಡಲು ಹಣವಿಲ್ಲ. ವಾಸ್ತವವಾಗಿ ರಾಜ್ಯದ ಖಜಾನೆ ಬರಿದಾಗಿದೆ. ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ರಾಜ್ಯ ಖಜಾನೆಯ ಬದಲು ತಮ್ಮ ಖಜಾನೆ ತುಂಬುವತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

ಯಡಿಯೂರಪ್ಪ ಮಂಡಿಸಲು ಮುಂದಾಗಿರುವ ಕೃಷಿ ಬಜೆಟ್‌ಅನ್ನು ಗಿಮಿಕ್ ಎಂದು ಟೀಕಿಸಿದ ರೇವಣ್ಣ ‘ಇಂಥ ಗಿಮಿಕ್ ಹೆಚ್ಚು ಕಾಲ ನಿಲ್ಲುವುದಿಲ್ಲ’ ಎಂದರು.ಮುಖ್ಯಮಂತ್ರಿ ತಮ್ಮ ಆಸ್ತಿ ಘೋಷಣೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ‘ಅವರೊಬ್ಬರು ಆಸ್ತಿ ಘೋಷಿಸಿದರೆ ಸಾಲದು. ಅವರು ಉಪ ಮುಖ್ಯಮಂತ್ರಿಯಾದಾಗಿನಿಂದ ಈವರೆಗೆ ಅವರ ಕುಟುಂಬದವರು ಸಂಗ್ರಹಿಸಿದ ಆಸ್ತಿಪಾಸ್ತಿ ಎಷ್ಟು ಎಂಬುದನ್ನೂ ಬಹಿರಂಗಪಡಿಸಬೇಕು. ತಮ್ಮ ತಪ್ಪುಗಳನ್ನು ಸಮರ್ಥಿಸುವ ಸಲುವಾಗಿಯೇ ಅವರು 11 ಮಂದಿ ವಕೀಲರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡಿ ಸರ್ಕಾರದಲ್ಲಿ ಇಟ್ಟುಕೊಂಡಿದ್ದಾರೆ. ರಾಜ್ಯದ ಹಿಂದಿನ ಯಾವ ಮುಖ್ಯಮಂತ್ರಿಯೂ ಇಷ್ಟೊಂದು ವಕೀಲರಿಗೆ ಸರ್ಕಾರಿ ಸಂಬಳ ನೀಡಿರಲಿಲ್ಲ’ ಎಂದರು.ಶಾಸಕ ಎಚ್.ಎಸ್. ಪ್ರಕಾಶ್, ಪಟೇಲ್ ಶಿವರಾಂ, ರಾಜ್ಯ ಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.