ADVERTISEMENT

ಹದಗೆಟ್ಟ ರಸ್ತೆ: ಲಾರಿ ಮಾಲೀಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 7:01 IST
Last Updated 20 ಜೂನ್ 2013, 7:01 IST

ಹಾಸನ: ರೈಲ್ವೆ ಗೂಡ್ಸ್ ಶೆಡ್ ಆವರಣದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಜಿಲ್ಲೆಗೆ ಬಂದಿದ್ದ ರಸಗೊಬ್ಬರವನ್ನು ಗೋದಾಮಿಗೆ ಒಯ್ಯಲು ವಿರೋಧಿಸಿ ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಬುಧವಾರ ನಡೆದಿದೆ.

ಜಿಲ್ಲೆಗೆ ಮಂಜೂರಾಗಿದ್ದ ರಸಗೊಬ್ಬರವನ್ನು ಬುಧವಾರ ರೈಲಿನ ಮೂಲಕ ಇಲ್ಲಿನ ಗೂಡ್ಸ್ ಶೆಡ್‌ಗೆ ತರಲಾಗಿತ್ತು. ಇಲ್ಲಿಂದ ಅದನ್ನು ಲಾರಿಗಳಲ್ಲಿ ತುಂಬಿ ಗೋದಾಮಿಗೆ ಕಳುಹಿಸಬೇಕಾಗಿತ್ತು. ಆದರೆ, ಗೂಡ್ಸ್‌ಶೆಡ್ ಆವರಣದಲ್ಲಿ ಲಾರಿಗಳು ಓಡಾಡಲೂ ಆಗದ ರೀತಿಯಲ್ಲಿ ರಸ್ತೆ ಹದಗೆಟ್ಟಿದೆ. ಭಾರಿ ಗಾತ್ರದ ಗುಂಡಿಗಳು ಬಿದ್ದು, ಅವುಗಳಲ್ಲಿ ನೀರು ನಿಂತಿದೆ. ಲಾರಿಗಳಿಗೇ ಅಪಾಯ ಸಂಭವಿಸುವ ಸ್ಥಿತಿ ಇರುವುದರಿಂದ ನಾವು ರಸಗೊಬ್ಬರವನ್ನು ಒಯ್ಯುವುದಿಲ್ಲ ಎಂದು ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ಆರಂಭಿಸಿದರು.

ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿಭಟನೆ ಅನಿವಾರ್ಯವಾಯಿತು ಎಂದು ಹೇಳಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಕೂಡಲೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಣ್ಣಾಜಿ, ಗೋಪಾಲ್, ಲಾರಿ ಮಾಲೀಕ ಅಣ್ಣಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.