ADVERTISEMENT

ಹಾಸನಾಂಬಾ ದೇಗುಲ: ಗೋಪುರ ಕೆಲಸ ಇನ್ನೂ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 4:55 IST
Last Updated 16 ಅಕ್ಟೋಬರ್ 2012, 4:55 IST

ಹಾಸನ: ಹಾಸನಾಂಬಾ ದೇವಸ್ಥಾನದ ಬಾಗಿಲು ತೆರೆಯಲು ಇನ್ನು 16ದಿನಗಳು ಮಾತ್ರ ಉಳಿದಿವೆ. ವರ್ಷಕ್ಕೊಮ್ಮೆ ಕೆಲವೇ ದಿನಗಳ ಕಾಲ ತೆರೆಯುವ ಈ ದೇವಸ್ಥಾನದ ಬಾಗಿಲು ಈ ವರ್ಷ ರಾಜ್ಯೋತ್ಸವದ ದಿನವೇ ತೆರೆಯಲಿದೆ. ನ.1ರಿಂದ ನ.15ರವರೆಗೆ ಭಕ್ತರು ಬಂದು ದೇವರ ದರ್ಶನ ಪಡೆಯಬಹುದು.

ಕಳೆದ ಒಂದೆರಡು ವರ್ಷಗಳಿಂದ ಹಾಸನಾಂಬೆಯ ದರ್ಶನವೂ ವಿವಾದಕ್ಕೆ ಕಾರಣವಾಗಿತ್ತು. ವರ್ಷಗಳಿಂದ ನಡೆಯುತ್ತಲೇ ಇರುವ ಹಾಸನಾಂಬಾ ದೇವಸ್ಥಾನದ ಗೋಪುರ ಕಾಮಗಾರಿ ಪೂರ್ಣಗೊಳ್ಳದಿರುವುದು ಭಕ್ತರ ಅಸಮಾಧಾನಕ್ಕೆ ಒಂದು ಕಾರಣವಾಗಿದ್ದರೆ, ಕಳೆದ ವರ್ಷದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ತಮ್ಮ ಆಂತರಿಕ ಕಲಹಕ್ಕೂ ಹಾಸನಾಂಬಾ ದೇವಸ್ಥಾನವನ್ನು ಬಳಸಿಕೊಂಡಿದ್ದು ಇನ್ನೊಂದು ಬೇಸರದ ವಿಚಾರವಾಗಿತ್ತು. ಈ ಎಲ್ಲದರ ಮಧ್ಯೆ ಶಿಕ್ಷೆ ಅನುಭವಿಸಿದ್ದು, ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತರು.

ಭಕ್ತರ ಒಂದು ಅಸಮಾಧಾನ ಈ ವರ್ಷವೂ ಮುಂದುವರಿಯುವುದು ಖಚಿತ. ಅದೆಂದರೆ ಹಾಸನಾಂಬಾ ದೇವಸ್ಥಾನದ ಮುಂದೆ ಸಿದ್ಧವಾಗುತ್ತಿರುವ ಗೋಪುರ ಈ ವರ್ಷ ಪೂರ್ಣವಾಗುತ್ತಿಲ್ಲ. ಗೋಪುರದ ಕಾಮಗಾರಿ ಪೂರ್ಣವಾಗಿದ್ದರೂ ಅಧಿಕೃತವಾಗಿ ಈ ವರ್ಷ ಅದರ ಉದ್ಘಾಟನೆಯಾಗುವುದು ಸಂದೇಹವಿದೆ. ಗೋಪುರಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯುತಿದ್ದು, 15 ದಿನಗಳಲ್ಲಿ ಅದು ಪೂರ್ಣಗೊಳ್ಳುವಂತೆ ಕಾಣುತ್ತಿಲ್ಲ. ಇನ್ನೂ ಒಂದಿಷ್ಟು ದಿನ ಕ್ಯೂರಿಂಗ್ ಮಾಡಿದ ಬಳಿಕ ಸುಣ್ಣ-ಬಣ್ಣ ಬಳಿಯಬೇಕು. ಬಣ್ಣ ಬಳಿಯುವ ಕೆಲಸ ಉತ್ಸವ ಮುಗಿದ ಬಳಿಕ ಮಾಡಬೇಕಾಗುತ್ತದೆ ಎಂದು ಜೀರ್ಣೋದ್ಧಾರ ಸಮಿತಿ ಸದಸ್ಯರು ಹೇಳುತ್ತಾರೆ.

ಹಾಸನಾಂಬಾ ದೇವಸ್ಥಾನದ ಮುಂದೆ ನಿರ್ಮಾಣವಾಗಿರುವ ಗೋಪುರ ಹಾಸನದ ಅತಿ ಎತ್ತರದ ಗೋಪುರ ಎನಿಸಲಿದೆ. (78 ಅಡಿ ಎತ್ತರ) ಈ ವರ್ಷ ಗೋಪುರದ ಮೂಲಕ ದೇವಸ್ಥಾನಕ್ಕೆ ಹೋಗಲು ಅವಕಾಶ ಲಭಿಸಬಹುದು ಅಷ್ಟೇ. ಬಣ್ಣ ಬಳಿದ ಗೋಪುರ ನೋಡಲು ಇನ್ನೂ ಕೆಲವು ತಿಂಗಳು ಕಾಯಬೇಕಾಗುತ್ತದೆ.

2010ರಲ್ಲಿ ಸರ್ಕಾರ ನೀಡಿದ್ದ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ದೇವಸ್ಥಾನದ ಸುತ್ತ ಕಾಂಪೌಂಡ್ ಹಾಗೂ ಇತರ ಕೆಲವು ಕಾಮಗಾರಿಗಳನ್ನು ಮಾಡಿದ್ದೇವೆ. ಇದಲ್ಲದೆ ಸಿದ್ದೇಶ್ವರ ದೇವಸ್ಥಾನದ ಕಾಮಗಾರಿ, ದೇವಸ್ಥಾನದ ಆವರಣದಲ್ಲಿ ಗ್ರಾನೈಟ್ ಕಲ್ಲು ಹೊದೆಸುವುದೇ ಮುಂತಾದ 1.40 ಕೋಟಿ ರೂಪಾಯಿಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಹಾಸನಾಂಬಾ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನಗಳಿಗೂ ಬಣ್ಣ ಬಳಿಯುವ ಉದ್ದೇಶವಿದೆ. ಈ ವರ್ಷದ ಹಬ್ಬ ಮುಗಿದ ಬಳಿಕ ಈ ಎಲ್ಲ ಕಾಮಗಾರಿ ಆರಂಭಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ಕಳೆದ ವರ್ಷ ದೇವಿಯ ದರ್ಶನಕ್ಕೆ ಬಂದಿದ್ದ ಸಾವಿರಾರು ಭಕ್ತರು ಬಿಸಿಲಿನಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು. ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲದೆ ಒದ್ದಾಡಿದ್ದಾರೆ. ಚಿಕ್ಕಪುಟ್ಟ ಕಾರಣಗಳಿಗೆ ಪೊಲೀಸರಿಂದ ಲಾಠಿಯ ರುಚಿ ನೋಡಿದ್ದಾರೆ. ಈ ಬಾರಿ ನಿರಾಂತವಾಗಿ ಹಾಸನಾಂಬೆ ಉತ್ಸವ ನಡೆಯುವುದೇ ಎಂಬುದನ್ನು ಕಾಯ್ದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.