ADVERTISEMENT

ಹೆಚ್ಚುವರಿ ಶುಲ್ಕ ಹಿಂದಿರುಗಿಸಲು ಎಬಿವಿಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 10:13 IST
Last Updated 1 ಆಗಸ್ಟ್ 2013, 10:13 IST

ಹಾಸನ: ಸಿಇಟಿ ಸಮಸ್ಯೆ ಬಗೆಹರಿಸುವುದು, ಎಂಜಿನಿಯರಿಂಗ್ ಕಾಲೇಜುಗಳವರು ಪಡೆದ ಹೆಚ್ಚುವರಿ ಹಣವನ್ನು ವಾಪಸ್ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

`ಸಿಇಟಿ ವ್ಯವಸ್ಥೆ ಇದ್ದರೂ ಎಂಜಿನಿಯರಿಂಗ್ ಪ್ರವೇಶದಲ್ಲಿ ಈಗ ಅನೇಕ ಗೊಂದಲಗಳು ನಿರ್ಮಾಣವಾಗಿವೆ. ಸಿಇಟಿ ಕೇಂದ್ರ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನೂರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಜುಲೈ 30ಕ್ಕೆ ಪ್ರವೇಶಾತಿ ಅಂತಿಮಗೊಳಿಸಬೇಕು ಎಂದು ಸುಪ್ರೀಮ್ ಕೋರ್ಟ್ ನಿರ್ದೇಶನ ನೀಡಿದೆ. ಇದರಿಂದಾಗಿ ದೂರದ ಊರುಗಳಲ್ಲಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗದಂತಾಗಿದೆ. ರಾಜ್ಯದಲ್ಲಿ 8,772 ಸೀಟುಗಳು ಖಾಲಿ ಉಳಿದಿವೆ. ಈಗ ಕೋರ್ಟ್ ಅವಕಾಶ ನೀಡಿದರೆ ಮಾತ್ರ ಪ್ರವೇಶ ಪಡೆಯಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ನುಡಿದರು.

ಸರ್ಕಾರ ಒಂದೇ ಸುತ್ತಿನಲ್ಲಿ ಎಲ್ಲ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವ ತೀರ್ಮಾನ ಕೈಗೊಂಡಿದ್ದರಿಂದ ಡಿಪ್ಲೊಮಾ ನಂತರ ಲ್ಯಾಟರಲ್ ಪ್ರವೇಶದ ಮೂಲಕ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ಪ್ರವೇಶ ಬಯಸಿದ ಸುಮಾರು 19ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದರು.

ಸರ್ಕಾರಿ ಕೌನ್ಸಿಲಿಂಗ್‌ಗೂ ಪೂರ್ವದಲ್ಲಿ ಕಾಮೆಡ್-ಕೆ ಕೌನ್ಸಿಲಿಂಗ್‌ಗೆ ಅವಕಾಶ ನೀಡುವ ಮೂಲಕ ಹೆಚ್ಚುವರಿ ಹಣ ವಸೂಲಿಗೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿದರು.

ಈ ಬಾರಿಯಿಂದ ಬಿ ಫಾರ್ಮಾ ಪ್ರವೇಶವನ್ನೂ ಸಿಇಟಿ ಕೇಂದ್ರದ ಮೂಲಕವೇ ಮಾಡುವ ತೀರ್ಮಾನ ಕೈಗೊಂಡಿದೆ. ಆದರೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿಲ್ಲ. ಸೂಕ್ತ ಸಾಫ್ಟ್‌ವೇರ್ ಇಲ್ಲದೆ ಸರ್ವರ್ ಬ್ಯುಸಿ ಎಂಬ ಸಮಸ್ಯೆ ಕಾಣಿಸಿದ್ದು, ಈವರೆಗೆ ಪ್ರವೇಶ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇಂಥ ಇನ್ನೂ ಅನೇಕ ಸಮಸ್ಯೆಗಳು ಇದ್ದು ಸರ್ಕಾರ ಕೂಡಲೇ ಇವೆಲ್ಲವುಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎ.ಬಿ.ವಿ.ಪಿ. ಪದಾಧಿಕಾರಿಗಳಾದ ಯತಿರಾಜು ಜಿ.ಎಂ, ಕೇಶವ ಕೆ.ಎಸ್, ಗಂಗಾಧರ ಎಸ್.ಪಿ, ಅರುಣಕುಮಾರ್ ಬಿ.ಎಸ್, ಸುಜಯ್, ರಂಜಿತ್, ಆದರ್ಶ ಮುಂತಾದವರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.