ಹಳೇಬೀಡು: `ಹೊಯ್ಸಳೇಶ್ವರ ದೇವಾ ಲಯ ಹಾಗೂ ಆವರಣಕ್ಕೆ ಸೋಲಾರ್ ದೀಪ ಅಳವಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಮಂಜೂರಾತಿ ದೊರಕಲಿದೆ' ಎಂದು ಪುರಾತತ್ವ ಇಲಾಖೆ ಕನ್ಸರೇಟಿವ್ ಅಸಿಸ್ಟೆಂಟ್ ಶರವಣ್ಣನ್ ತಿಳಿಸಿದರು.
ಹೊಯ್ಸಳೇಶ್ವರ ದೇವಾಲಯದಲ್ಲಿ ಮಂಗಳವಾರ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.
ದಕ್ಷಿಣ ದಿಕ್ಕಿಗೆ ಹೊಯ್ಸಳೇಶ್ವರ ಪ್ರವೇಶದ್ವಾರ ಬದಲಾಯಿಸಲು ಚಿಂತನೆ ಮಾಡಲಾಗಿದೆ. ಆದರೆ, ಹಲವು ಸಮಸ್ಯೆಗಳು ಸಹ ಎದುರಾಗಿದೆ. ದಕ್ಷಿಣ ಗೇಟಿನ ಮುಂಭಾಗದ ಸ್ಥಳದಲ್ಲಿ ವಾಹನ ಪ್ರವೇಶಕ್ಕೆ ಕಡಿವಾಣ ಹಾಕಬೇಕಾಗುತ್ತದೆ ಎಂದರು.
ಮುಂಭಾಗದ ಜಾಗದಲ್ಲಿ ಗಣ್ಯ, ಅತಿಗಣ್ಯರು ಆಗಮಿಸಿದಾಗ ಅವರ ವಾಹನ ಮಾತ್ರ ಪ್ರವೇಶಿಸುವ ವ್ಯವಸ್ಥೆ ಮಾಡಬೇಕು. ಹೊಯ್ಸಳೇಶ್ವರ, ಕೇದಾರೇಶ್ವರ ದೇವಾಲಯ ಹಾಗೂ ಜೈನ ಬಸದಿಗಳನ್ನು ಒಂದೇ ಸಂಕಿರ್ಣದಲ್ಲಿ ಪ್ರವಾಸಿಗರು ವಿಕ್ಷಣೆ ಮಾಡುವಂತೆ ಮಾಡಲು ಕೇದಾರೇಶ್ವರ ದೇವಾಲಯ ಬಳಿ ಜಮೀನು ಖರೀದಿಸಲು ಇಲಾಖೆ ಚಿಂತನೆ ನಡೆಸಿದೆ. ಹೊಯ್ಸಳೇಶ್ವರ ದೇವಾಲಯ ಹಿಂಭಾಗ ದ್ವಾರಸಮುದ್ರ ಕೆರೆ ಅಂಚಿನ ಜಮೀನುಗಳು ಸಹ ಅಗತ್ಯವಿರುವುದರಿಂದ ಅವುಗಳನ್ನು ಖರೀದಿ ಮಾಡಲು ಹಲವಾರು ತೊಡಕು ಉದ್ಭವಿಸಿದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.