ADVERTISEMENT

‘ಕೇಂದ್ರದ ಏಳು ಇಲಾಖೆಗಳ ಒಪ್ಪಿಗೆ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:46 IST
Last Updated 17 ಸೆಪ್ಟೆಂಬರ್ 2013, 6:46 IST

ಬೇಲೂರು: ‘ರಾಜ್ಯದಲ್ಲಿ 1600ಕ್ಕೂ ಹೆಚ್ಚು ತಜ್ಞ ವೈದ್ಯರ ಕೊರತೆಯಿದ್ದು, ಗ್ರಾಮೀಣ ಸೇವಾ ಕಾಯ್ದೆಗೆ ಅಂಕಿತ ದೊರಕಿದರೆ ವೈದ್ಯರ ನೇಮಕಾತಿ ಸುಲಭವಾಗಲಿದೆ’ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಮದನ್‌ಗೋಪಾಲ್‌ ಹೇಳಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೋಮವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

ಗ್ರಾಮೀಣ ಸೇವಾ ಕಾಯಿದೆಗೆ ಕೇಂದ್ರ ಸರ್ಕಾರದ ಎಂಟು ಇಲಾಖೆಗಳು ಒಪ್ಪಿಗೆ ನೀಡ ಬೇಕಾಗಿದೆ. ಈಗಾಗಲೇ ಏಳು ಇಲಾಖೆ ಒಪ್ಪಿಗೆ ನೀಡಿವೆ. ಇನ್ನೊಂದು ಇಲಾಖೆಯ ಒಪ್ಪಿಗೆ ದೊರಕಿದ ತಕ್ಷಣ ಕಾಯ್ದೆ ಜಾರಿಯಾಗಲಿದೆ. ಇದರಿಂದಾಗಿ ಎಂಬಿಬಿಎಸ್‌ ಸೇರಿದಂತೆ ತಜ್ಞ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಲಿದೆ ಎಂದರು.

ರಾಜ್ಯದಲ್ಲಿ 1200 ತಜ್ಞ ವೈದ್ಯರು, 221 ಸ್ತ್ರೀರೋಗ ತಜ್ಞರು, 178 ಅನಾಸ್ತೇಷಿಯಾ ವೈದ್ಯರ ಕೊರತೆಯಿದೆ. ಎಂಬಿಬಿಎಸ್‌ ವೈದ್ಯರಿಗೆ 65 ಸಾವಿರ ಸಂಬಳ ಮತ್ತು ತಜ್ಞ ವೈದ್ಯರಿಗೆ ಒಂದು ಲಕ್ಷ ರೂಪಾಯಿ ಸಂಬಳ ನೀಡಲು ಸರ್ಕಾರ ಸಿದ್ದವಿದೆ. ಆದರೆ, ವೈದ್ಯರು ಮುಂದೆ ಬರುತ್ತಿಲ್ಲ. ಎಂಬಿಬಿಎಸ್‌ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.  ನಿವೃತ್ತರಾಗಿರುವ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1600 ಸ್ಟಾಫ್‌ ನರ್ಸ್ ಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ ತಕ್ಷಣ ಆದೇಶ ಪತ್ರ ನೀಡಲಾಗುವುದು ಎಂದರು. ಹೊಸ ಮೆಡಿಕಲ್‌ ಕಾಲೇಜು: ರಾಜ್ಯದಲ್ಲಿ ಆರು ಹೊಸ ಮೆಡಿಕಲ್‌ ಕಾಲೇಜು ತೆರೆಯಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರಿ ಮೆಡಿಕಲ್‌ ಕಾಲೇಜು ತೆರೆಯುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ವೈದ್ಯರು ದೊರಕುವಂತಾಗುತ್ತದೆ ಎಂದು ಹೇಳಿದ ಮದನ್‌ ಗೋಪಾಲ್‌ ರಾಜ್ಯದ 171 ತಾಲ್ಲೂಕುಗಳಲ್ಲಿ ಜೆನರಿಕ್‌ ಔಷಧಿ ಅಂಗಡಿ ತೆರೆಯಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ 108 ಅಂಬುಲೆನ್ಸ್‌ ವಾಹನಗಳನ್ನು ದುರುಪಯೋಗ ಪಡಿಸಿಕೊಂಡಿರುವ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ವೈದ್ಯಕೀಯ ಕಾಲೇಜು ವ್ಯಾಪ್ತಿಯಲ್ಲಿರುವ ಜಿಲ್ಲಾ ಆಸ್ಪತ್ರೆಗಳನ್ನು ಯಾವುದೇ ಕಾರಣಕ್ಕೂ ಪ್ರತ್ಯೇಕಗೊಳಿಸುವುದಿಲ್ಲ. ಈ ಸಂಬಂಧ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಚರ್ಚಿಸಿ ಕೆಲ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಬೇಲೂರು ಆಸ್ಪತ್ರೆಯಲ್ಲಿನ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮದನ ಗೋಪಾಲ ಅವರನ್ನು ಭೇಟಿಯಾದ ಶಾಸಕ ವೈ.ಎನ್‌. ರುದ್ರೇಶ್‌ಗೌಡ, ಬೇಲೂರು ಆಸ್ಪತ್ರೆಗೆ ಕೂಡಲೇ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ತಹಶೀಲ್ದಾರ್‌ ರವಿಚಂದ್ರ ನಾಯಕ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂಧ್ಯಾ, ಆಡಳಿತ ವೈದ್ಯಾಧಿಕಾರಿ ನರಸೇಗೌಡ ಇತರರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.