ADVERTISEMENT

‘ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 10:20 IST
Last Updated 23 ಮಾರ್ಚ್ 2014, 10:20 IST

ಬೇಲೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಬಾರಿ ಒಕ್ಕಲಿಗರ ಮತ ನಂಬಿ ಚುನಾವಣೆಗೆ ಸ್ಪರ್ಧಿಸಿ­ದ್ದಾರೆ. ಆದರೆ, ಈ ಬಾರಿ ಒಕ್ಕಲಿಗರು ಕಾಂಗ್ರೆಸ್‌ ಅಭ್ಯರ್ಥಿ ಎ. ಮಂಜು ಅವರಿಗೆ ಮತ ನೀಡುವ ಮೂಲಕ ಜಿಲ್ಲೆಯಲ್ಲಿ ಬದಲಾವಣೆಗೆ ಕಾರಣರಾಗಲಿದ್ದಾರೆ ಎಂದು ಶಾಸಕ ವೈ.ಎನ್‌. ರುದ್ರೇಶ್‌­ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ನಿವಾಸದಲ್ಲಿ ಶನಿವಾರ ನಡೆದ ತಾಲ್ಲೂಕು ಕಾಂಗ್ರೆಸ್‌ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗುವುದಾದರೆ ಅದು ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ. ಮುಂದಿನ ದಿನದಲ್ಲಿ ಕಾಂಗ್ರೆಸ್‌ ಪಕ್ಷ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ವೈಖರಿಯನ್ನು ಮೆಚ್ಚಿರುವ ಎಲ್ಲಾ ಜಾತಿ ವರ್ಗದ ಜನರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್‌ ಮಾತನಾಡಿ, ಜಿಲ್ಲೆಯಲ್ಲಿ ಮೂರು ವರ್ಗದ ಮತದಾರರಿದ್ದು, ಕಾಂಗ್ರೆಸ್‌– ಜೆಡಿಎಸ್‌ಗೆ ಮತ ನೀಡುವ ಎರಡು ವರ್ಗಗಳಿದ್ದರೆ, ಮತ್ತೊಂದು ತಟಸ್ಥ ವರ್ಗವಿದೆ. ಈ ವರ್ಗದವರು ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಬೇಸತ್ತು ಕಾಂಗ್ರೆಸ್‌ ಗೆ ಮತ ನೀಡಲಿ ದ್ದಾರೆ. ಬೇಲೂರು ತಾಲ್ಲೂಕಿನ ಜನರು ದೇವೇಗೌಡರಿಗೆ ಏಕೆ ಓಟ್‌ ಹಾಕಬೇಕು? ಎಂಬುದನ್ನು ಯೋಚಿಸಬೇಕಾಗಿದೆ.

ತಾಲ್ಲೂಕಿನಲ್ಲಿರುವ ಡ್ಯಾಂನಿಂದ ಹೊಳೇನರಸೀಪುರಕ್ಕೆ ನೀರು ಕೊಂಡೊ­ಯ್ದರು. ಆದರೆ, ಬೇಲೂರಿನ ಹಳೇಬೀಡು– ಮಾದಿಹಳ್ಳಿ ಹೋಬಳಿಯ ಜನರಿಗೆ ನೀರು ಕೊಡಲಿಲ್ಲ. ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಗಮನ ಹರಿಸ­ಲಿಲ್ಲ. ತಾಲ್ಲೂಕಿನ ಜನರಿಗೆ ಆಗಿರುವ ಅನಾಹುತ, ನೋವಿಗೆ ದೇವೇಗೌಡರು ಮತ್ತು ಅವರ ಕುಟುಂಬದವರೇ ಕಾರಣ­ರಾ­ಗಿ­ದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇವೇಗೌಡರು ಸಂಸದರಾದಗಿನಿಂದ ಇಲ್ಲಿಯವರೆಗೆ 50 ಅನುದಾನ ಬಂದಿದೆ. ತಾಲ್ಲೂಕಿಗೆ ಕೊಟ್ಟಿರುವುದು ಕೇವಲ 50ರಿಂದ 60 ಲಕ್ಷ ರೂಪಾಯಿ ಮಾತ್ರ. ಜಿಲ್ಲೆಯನ್ನು ಸಮಗ್ರವಾಗಿ ಬೆಳೆಸಲು ದೇವೇಗೌಡರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ನಾಯಕಿ ಬಿ.ಕೆ. ಚಂದ್ರಕಲಾ ಮತ್ತು ಮುಖಂಡ ಬಿ. ಶಿವರುದ್ರಪ್ಪ ಮಾತನಾಡಿ, ಎಚ್‌.ಡಿ. ದೇವೇಗೌಡರಿಗೆ ಜಿಲ್ಲೆಯಲ್ಲಿ ವಿಳಾಸವೇ ಇರಲಿಲ್ಲ. ಮೂರು ತಿಂಗಳಿನಿಂದ ಜಿಲ್ಲೆಗೆ ಬಂದು ಮೊಸಳೆ ಕಣ್ಣೀರು ಸುರಿಸುತ್ತಿ­ದ್ದಾರೆ. ಬಿಜೆಪಿಯವರು ಹೊರಗಿನ ವ್ಯಕ್ತಿಯನ್ನು ಕಣಕ್ಕಿಳಿಸಿದ್ದಾರೆ. ಲಿಂಗಾಯಿ­ತರಿಗೆ ಟಿಕೆಟ್‌ ನೀಡಿಲ್ಲ ಎಂಬ ನೋವು ಲಿಂಗಾಯಿತರಿಗಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯಿತರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.