ADVERTISEMENT

‘ಹಿಂದಿ ಭಾಷೆ ಕಲಿಕೆಯಿಂದ ಉದ್ಯೋಗಾವಕಾಶ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 8:47 IST
Last Updated 26 ಸೆಪ್ಟೆಂಬರ್ 2013, 8:47 IST

ಹಾಸನ: ‘ಪ್ರತಿಯೊಬ್ಬರೂ ಮಾತೃ ಭಾಷೆಯ ಜೊತೆಗೆ ನಮ್ಮ ರಾಷ್ಟ್ರಭಾಷೆ ಹಿಂದಿಯನ್ನು ಕಲಿಯುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು’ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ ವ್ಯವಸ್ಥಾಪಕ ಕೆ. ದಿನೇಶ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಈಚೆಗೆ ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಅಂಚೆ ಇಲಾಖೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಭಾಷಾ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದಿ ಭಾಷೆ ಕಲಿಯುವುದರಿಂದ ಕೇಂದ್ರ ಸರ್ಕಾರ ಹಾಗೂ ಅಧೀನ ಸಂಸ್ಥೆಗಳ ಕಾರ್ಯಾಲಯಗಳಲ್ಲಿ ಅನೇಕ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಹಿಂದಿಯನ್ನು ಶಾಲಾ ಕಾಲೇಜು ಹಂತದಲ್ಲಿ ಅಭ್ಯಾಸ ಮಾಡಿಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಪ್ರಧಾನ ಅಂಚೆ ಕಚೇರಿ ಸಾರ್ವಜನಿಕ ಸಂಪರ್ಕ ನಿರೀಕ್ಷಕ ನಾಗೇಶ್, ‘ಸೇನೆಗೆ ಸೇರಲು ಬಯಸುವ ಅನೇಕ ಯುವಕರು ಹಿಂದಿ ಭಾಷಾ ಜ್ಞಾನದ ಕೊರತೆಯಿಂದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಶಾಲಾ-– ಕಾಲೇಜು ಅವಧಿಯಲ್ಲಿಯೇ ಹಿಂದಿಯ ಮಹತ್ವ ಅರಿತುಕೊಳ್ಳಲು ಪ್ರಯತ್ನಿಸಬೇಕು’ ಎಂದರು.

ಬಾಲಕರ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಟಿ.ಎಂ.ಪಾರ್ಥ, ಶಿಕ್ಷಕರಾದ ಡಿ.ವಿ.ರಂಗಸ್ವಾಮಿ, ಬಿ.ಎಸ್.ದೇಸಾಯಿ, ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್, ಶಿಕ್ಷಕಿ ಡಿ. ಮಂಜುಳಾ, ಬಿ.ವಿ. ಸುಕನ್ಯಾ ಹಾಗೂ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.