ADVERTISEMENT

ಹಾಸನದಲ್ಲಿ 3 ವರ್ಷಗಳಲ್ಲಿ 139 ಕೊಲೆ, 112 ಪತ್ತೆ: ಎಸ್‌ಪಿ ಮಾಹಿತಿ

ಭೂ ವ್ಯಾಜ್ಯ, ಕೌಟುಂಬಿಕ ಕಲಹ, ವೈಯಕ್ತಿಕ ದ್ವೇಷಕ್ಕೆ ಹತ್ಯೆ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 12:21 IST
Last Updated 31 ಆಗಸ್ಟ್ 2020, 12:21 IST
ಆರ್.ಶ್ರೀನಿವಾಸ್ ಗೌಡ
ಆರ್.ಶ್ರೀನಿವಾಸ್ ಗೌಡ   

ಹಾಸನ: ಜಿಲ್ಲೆಯಲ್ಲಿ ವಿವಿಧ ಕಾರಣಕ್ಕೆ ಮೂರು ವರ್ಷದಲ್ಲಿ 139 ಕೊಲೆಗಳಾಗಿದ್ದು, ಈವರೆಗೆ 112 ಪ್ರಕರಣಗಳನ್ನು
ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಸ್ತಿ, ಕೌಟುಂಬಿಕ ಕಲಹ, ಭೂ ವ್ಯಾಜ್ಯ, ವೈಯಕ್ತಿಕ ದ್ವೇಷ, ಕುಡಿದ ಅಮಲಿನಲ್ಲಿ ಗಲಾಟೆ ಹಾಗೂ ದರೋಡೆ ಪ್ರಕರಣಗಳಲ್ಲಿ ಕೊಲೆಗಳು ನಡೆದಿವೆ. ಮೂರು ವರ್ಷದಲ್ಲಿ ನಡೆದ 139 ಕೊಲೆಗಳ ಪೈಕಿ 112 ಪ್ರಕರಣಗಳನ್ನು ಭೇದಿಸಲಾಗಿದೆ. ಕೆಲವು ತನಿಖೆ ಹಂತದಲ್ಲಿದ್ದರೇ, ಮತ್ತೆ ಕೆಲ ಪ್ರಕರಣ ಪತ್ತೆಯಾಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರ್‌.ಶ್ರೀನಿವಾಸ್‌ಗೌಡ ಹೇಳಿದರು.

ಜಿಲ್ಲೆಯಲ್ಲಿ ಮರುಕಳುಹಿಸುತ್ತಿರುವ ಕೊಲೆ ಪ್ರಕರಣಗಳಲ್ಲಿ ಹೊರಗಿನವರೇ ಹೆಚ್ಚು ಭಾಗಿಯಾಗಿದ್ದಾರೆ. ಲಾಕ್‌ಡೌನ್‌
ಅವಧಿಯಲ್ಲಿ ಬೆಂಗಳೂರು ಹಾಗೂ ನೆರೆ ರಾಜ್ಯಗಳಿಂದ ಬಂದಿರುವ ಯುವಕರು ಕೆಲ ಅಪರಾಧ ಪ್ರಕರಣಗಳಲ್ಲಿ
ಭಾಗಿಯಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಹೊರಗಿವನವರೇ ಹೆಚ್ಚು ಭಾಗಿಯಾಗಿದ್ದಾರೆ.
ಬೆಂಗಳೂರು ಹಾಗೂ ತುಮಕೂರು ಚನ್ನರಾಯಪಟ್ಟಣ ತಾಲ್ಲೂಕಿಗೆ ಹತ್ತಿರವಾಗಿರುವ ಕಾರಣ ಆರೋಪಿಗಳು ಸುಲಭವಾಗಿ ಸಂಪರ್ಕ ಸಾಧಿಸಿ ಕೃತ್ಯವೆಸಗುತ್ತಿದ್ದಾರೆ. ಆದಷ್ಟು ಶೀಘ್ರ ಪ್ರಕರಣ ಭೇದಿಸಲಾಗುವುದು ಎಂದರು.

ADVERTISEMENT

ಚನ್ನರಾಯಪಟ್ಟಣದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ
ರಚಿಸಲಾಗಿದೆ. ತಾಲ್ಲೂಕಿನ ಹಲವು ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಅಪರಾಧ ಪತ್ತೆಯಲ್ಲಿ ಸ್ವಲ್ಪ ಹಿನ್ನೆಡೆ ಆಗಿದೆ. ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲು ಕರಪತ್ರಗಳನ್ನು ಹಂಚಲಾಗುತ್ತಿದೆ. ಅಪರಾಧ ಪ್ರಕರಣ ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯ. ಡಾಬಾ, ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ. ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗಲಾಗುತ್ತಿದೆ. ಮನೆಯ ಸುತ್ತ ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ, ಅವರ ಚಲನವಲನಗಳು ಅನುಮಾನಸ್ಪದವಾಗಿ ಇದ್ದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಹಾಸನದಿಂದ ಹಿರೀಸಾವೆ ವರೆಗೆ ಡಿವೈಎಸ್‌ಪಿ ಜತೆ ತಡರಾತ್ರಿ 3 ಗಂಟೆವರೆಗೂ ಗಸ್ತು ತಿರುಗಿ, ರಸ್ತೆಬದಿ ಕಾರು
ನಿಲ್ಲಿಸಿಕೊಂಡು ಮಾತನಾಡುತ್ತಿದ್ದವರು, ಮದ್ಯ ಸೇವನೆ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಹೊಳೆನರಸೀಪುರ ಉಪವಿಭಾಗದ ಉಪಾಧೀಕ್ಷಕ ಲಕ್ಷ್ಮೇಗೌಡ,
ಅರಕಲಗೂಡು ಸಿಪಿಐ ದೀಪಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.