ADVERTISEMENT

15ರಂದು ದಲಿತ ಸಾಹಿತ್ಯ ಸಮ್ಮೇಳನ

ದುದ್ದ ಶ್ರೀನಿವಾಸ್‌ ಸಮ್ಮೇಳನದ ಸರ್ವಾಧ್ಯಕ್ಷ 4ಮೂರು ಚಿಂತನಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:47 IST
Last Updated 6 ಡಿಸೆಂಬರ್ 2013, 10:47 IST

ಹಾಸನ: ‘ದಲಿತ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಡಿ. 15ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ಇದೇ ಮೊದಲ ಬಾರಿ ಜಿಲ್ಲಾಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಹೆತ್ತೂರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.

‘ಹಿರಿಯ ಸಾಹಿತಿ ದುದ್ದ ಶ್ರೀನಿವಾಸ್‌ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, 15ರಂದು ಬೆಳಿಗ್ಗೆ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡುವರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯ ಅಧಿಕಾರಿ ಮುಗವಳ್ಳಿ ಕೇಶವ ಧರಣಿ ಚಾಲನೆ ನೀಡಲಿದ್ದು, ಸಮ್ಮೇಳನವನ್ನು ಸಾಹಿತಿ ಅರವಿಂದ ಮಾಲಗತ್ತಿ ಉದ್ಘಾಟಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ ಪುಸ್ತಕ ಮಳಿಗೆ ಉದ್ಘಾಟನೆ ಮಾಡಲಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ ಅಂಬೇಡ್ಕರ್‌ ಭಾವಚಿತ್ರ ಅನಾವರಣ ಮಾಡುವರು ಎಂದರು.

ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ, ಮಾಜಿ ಪ್ರಧಾನಿ ಹಾಗೂ ಸಂಸದ ಎಚ್‌.ಡಿ. ದೇವೇಗೌಡ, ಶಾಸಕ ಎಚ್‌.ಎಸ್‌. ಪ್ರಕಾಶ್‌ ಪಾಲ್ಗೊಳ್ಳಲಿದ್ದಾರೆ.

ಮೂರು ಗೋಷ್ಠಿಗಳು ನಡೆಯುವವು. ‘ಬೂಸ ಸಾಹಿತ್ಯಕ್ಕೆ 40 ವರ್ಷ ಒಂದು ಚಿಂತನೆ’ ಕುರಿತು ಮೊದಲನೆ ಗೋಷ್ಠಿ ನಡೆಯಲಿದ್ದು, ಕೆ.ಟಿ. ಶಿವಪ್ರಸಾದ್‌, ಕೃಷ್ಣದಾಸ್‌, ಎಂ. ವೆಂಕಟಸ್ವಾಮಿ ಗೋಷ್ಠಿಯಲ್ಲಿ ಭಾಗವಹಿಸುವರು.

ಎರಡನೇ ಗೋಷ್ಠಿಯಲ್ಲಿ ‘ದಲಿತ ಚಳವಳಿ ಮತ್ತು ಮಹಿಳೆ’ ವಿಷಯದ ಬಗ್ಗೆ ಸಾಹಿತಿಗಳಾದ ಬಾನು ಮುಷ್ತಾಕ್‌, ಸರಸ್ವತಿ, ಸಮತಾ, ದೇಶಮಾನೆ, ಅನಸೂಯ ಭಾಗವಹಿಸುವರು. ಡಿ.ಎಸ್‌.ಎಸ್‌. ಮಹಿಳಾ ಘಟಕದ ಮೊದಲ ಅಧ್ಯಕ್ಷೆ ಗಂಗಮ್ಮ ಅಧ್ಯಕ್ಷತೆ ವಹಿಸುವರು.

ಕೊನೆಯಲ್ಲಿ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಎಸ್‌. ಶೇಖರ್‌ ವಹಿಸುವರು. ಹರೀಶ್‌ ಕಟ್ಟೆ ಬೆಳಗಲಿ, ಸಬ್ಬು ಹೊಲೆಯಾರ್‌, ಆನಂದ್‌, ಐಚನಹಳ್ಳಿ ಕೃಷ್ಣಪ್ಪ, ತಾರಾ ಚಂದ್ರ ಹಾಗೂ ಇತರರು ಪಾಲ್ಗೊಳ್ಳುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ದಸಂಸದ ಮಾವಳ್ಳಿ ಶಂಕರ್‌ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಎಲ್‌. ಹನುಮಂತಯ್ಯ, ಆರ್‌.ಪಿ. ವೆಂಕಟೇಶಮೂರ್ತಿ, ನರೇಂದ್ರ ಪಾಲ್ಗೊಳ್ಳುವರು.

ಸಮ್ಮೇಳನದಲ್ಲಿ ಹಿರಿಯ ದಲಿತ ಮುಖಂಡ ನಾರಾಯಣ್‌ ದಾಸ್‌ ಅವರಿಗೆ ‘ದಲಿತ ಚೇತನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪರಿಷತ್‌ನ ಉಪಾಧ್ಯಕ್ಷ ಸತೀಶ್‌, ಕಾರ್ಯದರ್ಶಿ ವೆಂಕಟೇಶ್‌, ಜಿಲ್ಲಾ ಸಂಚಾಲಕಿ ಸುವರ್ಣ, ಪ್ರಧಾನ ಕಾರ್ಯದರ್ಶಿ ಹುಳುವಾರೆ ಪ್ರಕಾಶ್‌, ಹಿರಿಯ ದಲಿತ ಮುಖಂಡ ನಾರಾಯಣ್ ದಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.