ADVERTISEMENT

ಹಾಸನ| 15ನೇ ದಿನಕ್ಕೆ ಆಶಾ ಕಾರ್ಯಕರ್ತೆಯರ ಧರಣಿ

ಬೇಡಿಕೆ ಈಡೇರಿಸದಿದ್ದರೆ 29ಕ್ಕೆ ರಾಜ್ಯ ವ್ಯಾಪಿ ಹೋರಾಟ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 12:52 IST
Last Updated 24 ಜುಲೈ 2020, 12:52 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು.   

ಹಾಸನ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ 15ನೇ ದಿನಕ್ಕೆ ಕಾಲಿರಿಸಿದೆ.

ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗದಿದ್ದರೆ ಜುಲೈ 29 ರಂದು ರಾಜಧಾನಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 12 ಸಾವಿರ ಗೌರವ ಧನ ನೀಡಬೇಕು. ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷ ಸಾಮಗ್ರಿಗಳನ್ನು ನೀಡಬೇಕು. ಸೋಂಕಿಗೆ ತುತ್ತಾದ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ಪರಿಹಾರದ ಜೊತೆಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂದು ಆ‌ಗ್ರಹಿಸಿದರು.

ADVERTISEMENT

ಕಳೆದ 15 ದಿನಗಳಿಂದ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಮತ್ತು ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜನವರಿ ತಿಂಗಳಿನಿಂದ ಈವರೆಗೆ ಸರ್ಕಾರಕ್ಕೆ 10 ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಮೂರು ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಹೇಳಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಟಿ. ಮಮತಾ, ಪದಾಧಿಕಾರಿಗಳಾದ ಶಾಯಿದಾ, ಶಬಾನ, ಸವಿತಾ, ರೂಪಾ, ಸರೋಜಾ, ಅರುಣಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.