ADVERTISEMENT

ಅರಕಲಗೂಡು: 2 ಸಾವಿರ ಪೌತಿ ಖಾತೆ ಬದಲಾವಣೆ

ರಾಜ್ಯದಲ್ಲೇ ಇದು ದಾಖಲೆ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:14 IST
Last Updated 26 ನವೆಂಬರ್ 2022, 5:14 IST
ಅರಕಲಗೂಡಿನ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯನ್ನು ಗೌರವಿಸಲಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ, ಜಯದೇವ ಸ್ವಾಮೀಜಿ, ಕೆ.ಆರ್.ಶ್ರೀನಿವಾಸ್ ಇದ್ದರು
ಅರಕಲಗೂಡಿನ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯನ್ನು ಗೌರವಿಸಲಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ, ಜಯದೇವ ಸ್ವಾಮೀಜಿ, ಕೆ.ಆರ್.ಶ್ರೀನಿವಾಸ್ ಇದ್ದರು   

ಅರಕಲಗೂಡು: ‘ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಪೌತಿ ಖಾತೆ ಆಂದೋಲನದಲ್ಲಿ 2 ಸಾವಿರ ಪೌತಿ ಖಾತೆ ಗಳ ಬದಲಾವಣೆಗೆ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲೇ ಇದು ದಾಖಲೆ ಎನ್ನಬಹುದು’ ಎಂದು ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕೇವಲ ಎರಡು ತಿಂಗಳಲ್ಲಿ 2 ಸಾವಿರ ಪೌತಿ ಖಾತೆಗಳನ್ನು ಸರಿಪಡಿಸಲಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 7 ಗಂಟೆಗೆ ರೈತರ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿ ವಾರಸುದಾರರ ಹೆಸರಿಗೆ ಜಮೀನಿನ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ಕೆಲವು ಗ್ರಾಮಗಳಲ್ಲಿ 2–3 ತಲೆಮಾರುಗಳಿಂದ ಖಾತೆ ಬದಲಾವಣೆ ಆಗಿರಲಿಲ್ಲ. ಮರಣ ಪ್ರಮಾಣಪತ್ರ ತರಲು ನ್ಯಾಯಾಲಯಕ್ಕೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಿ ಬಡ ರೈತರಿಗೆ ಅನುಕೂಲ ಮಾಡಲು ಗ್ರಾಮಸ್ಥರ ಸಮ್ಮುಖದಲ್ಲಿ ಮಹಜರ್ ನಡೆಸಿ ವಂಶವೃಕ್ಷ ತಯಾರಿಸಿ ಪೌತಿ ಖಾತೆಯ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಪೌತಿ ಖಾತೆ ಬದಲಾಗದ ಕಾರಣ ರೈತರು ಕೃಷಿ ಸಾಲ ಪಡೆಯಲು, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸೇರಿದಂತೆ ವಿವಿಧ ಅನುದಾನಗಳನ್ನು ಪಡೆದುಕೊಳ್ಳಲು ತೊಂದರೆಯಾಗಿತ್ತು. ನಮ್ಮ ಕಚೇರಿ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಪೌತಿ ಖಾತೆ ಆಂದೋಲನದಲ್ಲಿ ಶ್ರಮಿಸಿದ್ದಾರೆ’ ಎಂದು ಶ್ಲಾಘಿಸಿದರು.

ADVERTISEMENT

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪೌತಿ ಖಾತೆ ಆಂದೋಲನದಲ್ಲಿ ಶ್ರಮಿಸಿದ ಕಂದಾಯ ಇಲಾಖೆ ಸಿಬ್ಬಂದಿ ಅಂಕೇಗೌಡ, ಭಾಸ್ಕರ್, ಕೇಶವ ಮೂರ್ತಿ, ಮಾಲಾಶ್ರೀ, ಕಾವ್ಯಾ ಅವರನ್ನು ದೊಡ್ಡ ಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಮಠಾಧೀಶ ಜಯದೇವ ಸ್ವಾಮೀಜಿ ಅಭಿನಂದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್. ರಮೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.