ADVERTISEMENT

ಹಾಸನ: 25 ಜನರಿಗೆ ಕೊರೊನಾ ಪಾಸಿಟಿವ್‌, ಸೋಂಕಿತರ ಸಂಖ್ಯೆ 711ಕ್ಕೆ ಏರಿಕೆ

ಈವರೆಗೆ ಮೃತಪಟ್ಟವರು 21 ಮಂದಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 14:38 IST
Last Updated 13 ಜುಲೈ 2020, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಬೆಂಗಳೂರಿನಿಂದ ಮರಳಿದ್ದ ಎಂಟು ಜನರು ಸೇರಿ ಜಿಲ್ಲೆಯಲ್ಲಿ ಸೋಮವಾರ 25 ಹೊಸ ಕೊರೊನಾ ಪಾಸಿಟಿವ್ ಪ್ರಕರಣ‌ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 711ಕ್ಕೆ ಏರಿಕೆಯಾಗಿದೆ.

ಆಲೂರು ತಾಲ್ಲೂಕಿನ 1, ಅರಸೀಕೆರೆ 4, ಚನ್ನರಾಯಪಟ್ಟಣ 4, ಹಾಸನ 12, ಹೊಳೆನರಸೀಪುರ 3, ಸಕಲೇಶಪುರ 1 ಒಟ್ಟು 25 ಪ್ರಕರಣಗಳು ಪತ್ತೆಯಾಗಿವೆ. ಹಾಸನ ಆರೋಗ್ಯ ಕೇಂದ್ರದ ಇಬ್ಬರಿಗೂ ಸೋಂಕು ತಗುಲಿದೆ.

ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರಸೀಕೆರೆ ತಾಲ್ಲೂಕಿನ 82 ವರ್ಷದ ವೃದ್ಧೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ
ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆ ಆಗಿದೆ. ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 455 ಜನರು
ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳು 235ಕ್ಕೆ ಏರಿದೆ. ತೀವ್ರ ನಿಗಾ ಘಟದಲ್ಲಿ 12 ಮಂದಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ವೃದ್ಧರು ಮತ್ತು ಮಕ್ಕಳು ಮನೆಯಿಂದ ಹೊರಗೆ
ಹೋಗಬಾರದು. ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸ್ಯಾನಿಟೈಸರ್‌ ಬಳಕೆ ಹಾಗೂ ಅಂತರ ಪಾಲನೆ ಮಾಡಬೇಕು ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಆತಂಕ:ಕೆಎಸ್‌ಆರ್‌ಟಿಸಿ ಸಿಬ್ಬಂದಿಯಲ್ಲಿ ಸೋಂಕು ಹರಡುವಿಕೆ ತೀವ್ರಗೊಂಡಿದ್ದು, ಆತಂಕ ಹೆಚ್ಚಾಗಿದೆ. ಕರ್ತವ್ಯ ನಿರತ 13 ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ. 57 ವರ್ಷದ ನೌಕರ ಭಾನುವಾರ ಮೃತಪಟ್ಟಿದ್ದು, ಮತ್ತೊಬ್ಬರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಉಳಿದ ಹನ್ನೊಂದು ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಪ್ರತಿ ದಿನ 50 ಸಿಬ್ಬಂದಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಲಾಗುತ್ತಿದೆ. ಈವರೆಗೆ 300 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಸೋಂಕಿತರ ಪ್ರಯಾಣ ಹಿನ್ನೆಲೆ ಪತ್ತೆ ಮತ್ತು ಪ್ರಾರ್ಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡುವುದೇ ಸಾಹಸದ ಕೆಲಸವಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ತಿಳಿಸಿದರು.

‘ಲಾಕ್‌ಡೌನ್‌ ತೆರವು ಬಳಿಕ ಒಟ್ಟು 580 ಮಾರ್ಗಗಳ ಪೈಕಿ ಅರ್ಧಕ್ಕಿಂತಲೂ ಕಡಿಮೆ ಬಸ್‌ ಓಡಾಡುತ್ತಿದ್ದವು. ಆರಂಭದ ದಿನಗಳಲ್ಲಿ 80 ಬಸ್‌ಗಳನ್ನು ಮಾತ್ರ ಬಿಡಲಾಗಿತ್ತು. ನಂತರ ದಿನಗಳಲ್ಲಿ ಬಸ್‌ಗಳ ಸಂಖ್ಯೆ 250ಕ್ಕೇರಿತು. ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿರುವುದರಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಓಡಾಡುವ ಬಸ್ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ’ ಎಂದರು.

ಎಸ್‌ಡಿಎಂನಲ್ಲಿ 200 ಹಾಸಿಗೆ

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆಗಾಗಿ ಜಿಲ್ಲಾಡಳಿತ ನಗರದ
ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ 200 ಹಾಸಿಗೆಗಳ ಕಟ್ಟಡವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು, ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ ಎಸ್‌ಡಿಎಂನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭವಾದರೆ ಖಾಸಗಿ ವೈದ್ಯರು ಪಾಳಿ ಆಧಾರದಲ್ಲಿ ಸೇವೆಗೆ ಬರಬೇಕೆಂದು ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.