ADVERTISEMENT

25 ವರ್ಷದ ಪುಂಡಾನೆ ಸೆರೆ, ಪೂರಕ ಅರಣ್ಯ ಪ್ರದೇಶಕ್ಕೆ ಆನೆ ಬಿಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 15:53 IST
Last Updated 26 ಜನವರಿ 2021, 15:53 IST
ಯಸಳೂರು ಮೀಸಲು ಅರಣ್ಯ ವ್ಯಾಪ್ತಿಯ ಮತ್ತೂರು ಬಳಿ ಪುಂಡಾನೆಯನ್ನು ಸೆರೆ ಹಿಡಿಯಲಾಯಿತು.
ಯಸಳೂರು ಮೀಸಲು ಅರಣ್ಯ ವ್ಯಾಪ್ತಿಯ ಮತ್ತೂರು ಬಳಿ ಪುಂಡಾನೆಯನ್ನು ಸೆರೆ ಹಿಡಿಯಲಾಯಿತು.   

ಹಾಸನ/ಹೆತ್ತೂರು: ಯಸಳೂರು ಹೋಬಳಿಯ ಮತ್ತೂರು ಮಿಸಲು ಅರಣ್ಯದಲ್ಲಿ ಮಂಗಳವಾರ ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಯಸಳೂರು ಮೀಸಲು ಅರಣ್ಯ ವ್ಯಾಪ್ತಿಯ ಮತ್ತೂರು ಬಳಿ ಆನೆಗಳ ಗುಂಪು ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂತು. ಬಳಿಕ ನಾಗಾವರ ಆನೆ ಶಿಬಿರದಿಂದ ಸಾಕು ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಗಣೇಶ, ಕೃಷ್ಣ, ಸುಗ್ರೀವಾ ಹಾಗೂ ಧನಂಜಯ ಆನೆಗಳನ್ನು ಲಾರಿ ಮೂಲಕ ಯಸಳೂರಿಗೆ ಕರೆತರಲಾಯಿತು. ಮಧ್ಯಾಹ್ನದ ಬಳಿಕ ಕೂಬಿಂಗ್‌ ಆರಂಭಿಸಲಾಯಿತು.

ಪಶುವೈದ್ಯರಾದ ಸನಂತ್ ಮಜೀದ್, ಮುರುಳಿಧರನ್, ಶಾರ್ಪ್‌ ಶೂಟರ್ ವೆಂಕಟೇಶ್, ಆರ್‌.ಎಫ್‌.ಒ ಮೋಹನ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಸಂಜೆ 4 ಗಂಟೆಗೆ ಗಂಡಾನೆಗೆ ಅರಿವಳಿಕೆ ಮದ್ದು ನೀಡಿತು. ಅರಿವಳಿಕೆ ನೀಡುತ್ತಿದ್ದಂತೆ ಒಂದು ಕಿ.ಮೀ. ಓಡಿ ಪ್ರಜ್ಞೆ ತಪ್ಪಿ ಬಿತ್ತು. ಅರಣ್ಯ ಸಿಬ್ಬಂದಿ ಹಗ್ಗ ಹಾಗೂ ಕಬ್ಬಿಣದ ಸರಪಳಿಯಿಂದ ಪುಂಡಾನೆಯನ್ನು ಬಂಧಿಸಿದರು.

ADVERTISEMENT

‘ಯಸಳೂರು ಅರಣ್ಯ ವಲಯದ ಮತ್ತೂರು ಬಳಿ ಅಂದಾಜು 25 ವರ್ಷದ ಗಂಡಾನೆ ಸೆರೆ
ಹಿಡಿಯಲಾಗಿದೆ. ಈ ಆನೆಯನ್ನು ಜಿಲ್ಲೆಯಿಂದ ಹೊರಭಾಗದ ಪೂರಕ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು. ಈ ಸಮಸ್ಯಾತ್ಮಕ ಆನೆಯ ಚಲನವಲನ ತಿಳಿಯಲು ರೇಡಿಯೊ ಕಾಲರ್‌ ಅಳವಡಿಸಲಾಗಿದೆ. ಬುಧವಾರ ಮತ್ತೊಂದು ಹೆಣ್ಣಾನೆಗೆ ರೇಡಿಯೊ ಕಾಲರ‍್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.