ADVERTISEMENT

ತಂಬಾಕಿಗೆ ಬಂಪರ್‌ ಬೆಲೆ: ರಾಮನಾಥಪುರ ಮಾರುಕಟ್ಟೆಯಲ್ಲಿ ₹288 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 20:41 IST
Last Updated 13 ಜನವರಿ 2024, 20:41 IST
ಹಾಸನ ಜಿಲ್ಲೆಯ ಕೊಣನೂರು ಸಮೀಪದ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿನ ಹೊಗೆಸೊಪ್ಪು ವಹಿವಾಟು 
ಹಾಸನ ಜಿಲ್ಲೆಯ ಕೊಣನೂರು ಸಮೀಪದ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿನ ಹೊಗೆಸೊಪ್ಪು ವಹಿವಾಟು    

ಕೊಣನೂರು (ಹಾಸನ ಜಿಲ್ಲೆ): ಹಲವು ವರ್ಷಗಳಿಂದ ಉತ್ತಮ ಧಾರಣೆ ಸಿಗದೆ ನಷ್ಟ ಅನುಭವಿಸಿ ಕೈಸುಟ್ಟುಕೊಳ್ಳುತ್ತಿದ್ದ ರೈತರನ್ನು ಈ ಬಾರಿ ಕಡಿಮೆ ಗುಣಮಟ್ಟದ ತಂಬಾಕು ಕೈಹಿಡಿದಿದೆ.

ಕಪ್ಪು ತರಗು, ಕೆಂಪು ತರಗು ಹಾಗೂ ಹಸಿರು (ಗ್ರೇಡ್‌ 4ರಿಂದ 6) ತಂಬಾಕು ಧಾರಣೆ ಏರಿಕೆಯಾಗಿದೆ. ಹಾಗಾಗಿ, ಈ ಬಾರಿ ಬರಗಾಲದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.  

ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಕಡಿಮೆ ಗುಣಮಟ್ಟದ ಹೊಗೆಸೊಪ್ಪಿನ ಸರಾಸರಿ ದರವು ಗರಿಷ್ಠ ಮಟ್ಟ ತಲುಪಿದ್ದು, ಬೆಳೆಗಾರರಿಗೆ ಬಂಪರ್ ಬೆಲೆ ದೊರೆತಿದೆ.

ADVERTISEMENT

ತಂಬಾಕು ಮಾರುಕಟ್ಟೆಯ ಪ್ಲಾಟ್ ಫಾರಂ 7ರಲ್ಲಿ 2023ರ ಸೆಪ್ಟೆಂಬರ್‌ 27ರಿಂದ ಜನವರಿ 11ರವರೆಗೆ 6,035 ಟನ್‌ ಹೊಗೆಸೊಪ್ಪು ಖರೀದಿಯಾಗಿದ್ದು, ₹150.57 ಕೋಟಿ ವಹಿವಾಟು ನಡೆದಿದೆ. ಪ್ರತಿ ಕೆ.ಜಿ.ಗೆ ಗರಿಷ್ಠ ₹272 ಹಾಗೂ ಕನಿಷ್ಠ ₹200 ದರ ದೊರೆತಿದೆ.

ಪ್ಲಾಟ್ ಫಾರಂ 63ರಲ್ಲಿ 5,022 ಟನ್ ತಂಬಾಕು ಖರೀದಿಯಾಗಿದ್ದು, ₹138.39 ಕೋಟಿ ವಹಿವಾಟು ನಡೆದಿದೆ. ಇಲ್ಲಿ ಬೆಳೆಗಾರರಿಗೆ ಗರಿಷ್ಠ ₹272 ಹಾಗೂ ಕನಿಷ್ಠ ₹198 ದರ ಸಿಕ್ಕಿದೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂಬಾಕಿಗೆ ಬೇಡಿಕೆ ಹೆಚ್ಚಿರುವುದರಿಂದ ಉತ್ತಮ ದರ ಸಿಗುತ್ತಿದೆ. ರಾಜ್ಯದಲ್ಲಿ ಈ ಬಾರಿ 82,800 ಟನ್‌ ಹೊಗೆಸೊಪ್ಪು ಖರೀದಿಸುವ ಗುರಿ ಇದ್ದು, ಇಲ್ಲಿಯವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ 49,300 ಟನ್ ಮಾರಾಟವಾಗಿದೆ’ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಜಿ.ಬಿ. ಸುಬ್ಬರಾವ್ ತಿಳಿಸಿದರು.

ಹಿಂದಿನ ವರ್ಷ ಕೆ.ಜಿ.ಗೆ ಸರಾಸರಿ ₹231.81 ದರ ಸಿಕ್ಕಿತ್ತು. ಈ ಬಾರಿ ಕೆ.ಜಿ.ಗೆ ₹246.71 ದರ ಸಿಕ್ಕಿದೆ. ಒಟ್ಟಾರೆ ಸರಾಸರಿ ದರದಲ್ಲಿ ಕೆ.ಜಿ.ಗೆ ₹14.9 ಹೆಚ್ಚಳವಾಗಿದ್ದು, ರೈತರಿಗೆ ಲಾಭವಾಗಿದೆ.

ಹಾಸನ ಜಿಲ್ಲೆಯ ಕೊಣನೂರು ಸಮೀಪದ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ವಹಿವಾಟು 
ಸಿ.ಪಿ. ನಂಜಪ್ಪ
ಎನ್. ಈರೇಗೌಡ

Quote - ಈ ಬಾರಿ ತಂಬಾಕಿನ ಬೆಲೆ ಸುಧಾರಣೆ ಕಂಡಿದೆ. ಕಡಿಮೆ ಗುಣಮಟ್ಟದ ಹಾಗೂ ಹುಡಿ ಬೇಲ್‌ಗಳಿಗೂ ಉತ್ತಮ ಧಾರಣೆ ದೊರೆಯುತ್ತಿದೆ ಸಿ.ಪಿ. ನಂಜಪ್ಪ ತಂಬಾಕು ಬೆಳೆಗಾರ

Quote - ಮಾರುಕಟ್ಟೆಯ ಕೊನೆಯ ದಿನದವರೆಗೂ ದರ ಹೀಗೆಯೇ ಮುಂದುವರಿದರೆ ಉತ್ತಮ. ಬರಗಾಲದಲ್ಲಿ ಪರಿಶ್ರಮದಿಂದ ಬೆಳೆದ ಬೆಳೆಗೆ ಒಳ್ಳೆಯ ದರ ದೊರಕುತ್ತಿರುವುದು ಸಮಾಧಾನ ತಂದಿದೆ ಎನ್. ಈರೇಗೌಡ ತಂಬಾಕು ಬೆಳೆಗಾರ

Cut-off box - ತಂಬಾಕು ಹುಡಿಗೂ ಬೇಡಿಕೆ ಈ ವರ್ಷ ಹೊಗೆಸೊಪ್ಪಿನ ಹುಡಿಗೂ ಉತ್ತಮ ಬೆಲೆ ದೊರೆಕಿದೆ. ಇಷ್ಟು ವರ್ಷ ಜಮೀನಿಗೆ ಸುರಿಯುತ್ತಿದ್ದ ಹುಡಿಯನ್ನೂ ಈಗ ಕೆ.ಜಿ.ಗೆ ₹100ರಿಂದ ₹166 ದರದಲ್ಲಿ ಖರೀದಿಸಲಾಗುತ್ತಿದೆ. ಬೀಡಿ ಕಟ್ಟಲು ಚಾಮರಾಜನಗರ ಜಿಲ್ಲೆಯ ದಲ್ಲಾಳಿಗಳು ರೈತರ ಮನೆ ಬಾಗಿಲಿಗೆ ತೆರಳಿ ತಂಬಾಕು ಹುಡಿಯನ್ನು ಖರೀದಿಸುತ್ತಿದ್ದರು. ಹಿಂದಿನ ವರ್ಷಗಳಲ್ಲಿ ಪ್ರತಿ ಕೆ.ಜಿ. ಹುಡಿಗೆ ಕೇವಲ ₹10ರಿಂದ ₹12 ದರ ಇತ್ತು. ಈ ಬಾರಿ ಯಾರಿಗೂ ಬೇಡವಾಗಿದ್ದ ಹುಡಿ ರೈತರ ಜೇಬು ತುಂಬಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.