ADVERTISEMENT

ಚನ್ನರಾಯಪಟ್ಟಣ: ನಾಲೆ ಅಭಿವೃದ್ದಿಗೆ ₹49ಲಕ್ಷ ಅನುದಾನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:05 IST
Last Updated 4 ಜೂನ್ 2025, 15:05 IST
ಚನ್ನರಾಯಪಟ್ಟಣ ತಾಲ್ಲೂಕು ಗುಲಸಿಂದ ಗ್ರಾಮದಲ್ಲಿ ರಾಘವೇಂದ್ರಸ್ವಾಮಿ ಪೂಜಾಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮದ ಹಿರಿಯರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಸನ್ಮಾನಿಸಿದರು
ಚನ್ನರಾಯಪಟ್ಟಣ ತಾಲ್ಲೂಕು ಗುಲಸಿಂದ ಗ್ರಾಮದಲ್ಲಿ ರಾಘವೇಂದ್ರಸ್ವಾಮಿ ಪೂಜಾಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮದ ಹಿರಿಯರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಸನ್ಮಾನಿಸಿದರು   

ಚನ್ನರಾಯಪಟ್ಟಣ: ಗುಲಸಿಂದ ಗ್ರಾಮದಲ್ಲಿರುವ ರಾಘವೇಂದ್ರಸ್ವಾಮಿ ನೂತನ ಪೂಜಾಮಂದಿರದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಮತ್ತು ಕೆರೆಕೋಡಿ ನೀರು ಸರಾಗವಾಗಿ ಹರಿಯಲು ನಾಲೆ ನಿರ್ಮಾಣಕ್ಕೆ ₹49 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಕಸಬಾ ಹೋಬಳಿ ಗುಲಸಿಂದ ಗ್ರಾಮದಲ್ಲಿ ರಾಘವೇಂದ್ರ ಸ್ವಾಮಿ ಪೂಜಾಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಕೆರೆ ತುಂಬಿದಾಗ ಕೋಡಿಯಲ್ಲಿ ಹೆಚ್ಚುಪ್ರಮಾಣದಲ್ಲಿ ನೀರು ಹರಿಯುವುದರಿಂದ ರಾಘವೇಂದರಸ್ವಾಮಿ ದೇಗುಲಕ್ಕೆ ಹಾನಿಯಾಗುವ ಸಾದ್ಯತೆ ಇತ್ತು. ದೇಗುಲದ ಧರ್ಮದರ್ಶಿಯ ಮನವಿ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಗ್ರಾಮದಲ್ಲಿ ಪುರಾತನ ಕಾಲದ ಲಕ್ಷ್ಮೀದೇವಿ, ರಂಗನಾಥಸ್ವಾಮಿ ದೇವಾಲಯಗಳಿವೆ. ನೂತನವಾಗಿ ರಾಘವೇಂದ್ರ ಸ್ವಾಮಿದೇಗುಲವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದ ಅವರು, ಬಾಗೂರು ಮುಖ್ಯ ರಸ್ತೆಗೆ ಅಂದಾಜು ₹3 ಲಕ್ಷ ವೆಚ್ಚಮಾಡಿ ಸ್ವಾಗತ ಕಮಾನು ನಿರ್ಮಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಿದ್ದಾರೆ ಎಂದರು.  

ADVERTISEMENT

ರಾಷ್ಟ್ರೀಯ ಹೆದ್ದಾರಿಯಿಂದ ಗುಲಸಿಂದ ಗ್ರಾಮದವರೆಗೆ 2 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಗ್ರಾಮ ಶೀತಪೀಡಿತ ಪ್ರದೇಶಕ್ಕೆ ಸೇರ್ಪಡೆಯಾಗಿದೆ. ಸರ್ಕಾರ ಮಂಜೂರು ಮಾಡಿದ ನಿವೇಶನದಲ್ಲಿ ಗ್ರಾಮಸ್ಥರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅಲ್ಲಿಗೆ ಸಾಕಷ್ಟು ಅಭಿವೃದ್ದಿ ಕೈಗೊಳ್ಳಬೇಕಿದೆ. ಎರಡು ವರ್ಷದಿಂದ ರಾಜ್ಯಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ ಕಾಮಗಾರಿ ಕೈಗೊಂಡಿಲ್ಲ. ಮುಂದಿನ ಮೂರುತಿಂಗಳಲ್ಲಿ ರಸ್ತೆ ಅಭಿವೃದಿ ಮಾಡಲಾಗುವುದು ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮಗಳಿಂದ ಮನಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಗ್ರಾಮಸ್ಥರು ಸಹಬಾಳ್ವೆ, ಸಾಮರಸ್ಯದಿಂದ ಬದುಕುಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ತಾಲ್ಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ಶಿಥಿಲವಾಗಿರುವ ದೇಗುಲ ನವೀಕರಣ ಮಾಡುವುದು, ರಥದಮನೆ ನಿರ್ಮಾಣ ಮಾಡಲು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಘವೇಂದ್ರಸ್ವಾಮಿ ಪೂಜಾಮಂದಿರದ ಧರ್ಮದರ್ಶಿ ರಾಧಾಕೃಷ್ಣ ಮಾತನಾಡಿ, ಎರಡು ವರ್ಷದ ಹಿಂದೆ ದೇಗುಲ ನಿರ್ಮಾಣ ಕೈಗೆತ್ತಿಕೊಳ್ಳಲಾಯಿತು. ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಗ್ರಾಮದ 30ಕ್ಕೂ ಹೆಚ್ಚು ಹಿರಿಯರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ಮಂಜುನಾಥ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಮುಖಂಡರಾದ ಗೋವಿಂದೇಗೌಡ, ಚಂದ್ರೇಗೌಡ, ಶಿವೇಗೌಡ, ನಾಗೇಶ್, ನಾಗರಾಜು, ಹಿರಿಯಣ್ಣ, ಲಕ್ಷ್ಮೀನಾರಾಯಣ, ನವೀನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.