ADVERTISEMENT

ಹಾಸನ: ಅಂಗನವಾಡಿ ನೌಕರರಿಗೆ ₹50 ಲಕ್ಷ ವಿಮೆ ನೀಡುವಂತೆ ಆಗ್ರಹ

ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 13:14 IST
Last Updated 13 ಜುಲೈ 2020, 13:14 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು  ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು  ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.   

ಹಾಸನ: ಕೊರೊನಾ ವಾರಿಯರ್‌ಗಳಾಗಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ₹ 50 ಲಕ್ಷ ವಿಮೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೊರನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಗುಣಮಟ್ಟದ ಸ್ಯಾನಿಟೈಸರ್‌, ಮಾಸ್ಕ್‌‌, ಪಿಪಿಇ ಕಿಟ್‌ಗಳನ್ನು ಒದಗಿಸಬೇಕು. ಮಕ್ಕಳ ಮಾಸಿಕ ತಪಾಸಣೆ ಮತ್ತು ತೂಕ ಮಾಡುವಾಗ ಅಂಗನವಾಡಿ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಿಸಬೇಕು. ಅಲ್ಲದೇ ನೌಕರರಿಗೆ ₹ 25 ಸಾವಿರ ಪ್ರೋತ್ಸಾಹ ಧನ ಮತ್ತು ಸ್ಥಳೀಯ ಸಾರಿಗೆ ಬಸ್‌ಪಾಸ್‌, ಊಟದ ವೆಚ್ಚವನ್ನು ಭರಿಸಬೇಕು. ಸೋಂಕು ತಗುಲಿದ ಕಾರ್ಯಕರ್ತರಿಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮೀಸಲಾತಿ, ಸೇವಾ ಹಿರಿತನ ಆಧಾರದಲ್ಲಿ ಮುಂಬಡ್ತಿ ನೀಡಬೇಕು. ಸಹಾಯಕಿಯರಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಮುಂಬಡ್ತಿ ನೀಡುವಾಗ ವಯಸ್ಸಿನ ಮಿತಿ ತೆಗೆಯಬೇಕು. ನೌಕರರನ್ನು ಕಾಯಂ ಮಾಡಬೇಕು. ಕಾಯಂ ಮಾಡುವ ತನಕ ಕಾರ್ಯಕರ್ತೆಯರಿಗೆ ₹ 30 ಸಾವಿರ ಹಾಗೂ ಸಹಾಯಕಿಯರಿಗೆ ₹ 21 ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಖಾಲಿಯಿರುವ ಸಹಾಯಕಿಯರು, ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ನಾಲ್ಕು ವರ್ಷದಿಂದ ಎರಡು ತಿಂಗಳು ಆಹಾರ ಸಾಮಗ್ರಿಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡದಿರುವ ಬಗ್ಗೆ ತನಿಖೆಯಾಗಬೇಕು ಎಂದರು.

ADVERTISEMENT

ಎಲ್.ಐ.ಸಿ ಆಧಾರಿತ ನಿವೃತ್ತಿ ವೇತನ ಕೊಡಬೇಕು. ಆದಾಯ ತೆರಿಗೆ ಕಟ್ಟಲು ಸಾಮರ್ಥ್ಯ ಇಲ್ಲದ ಕುಟುಂಬಗಳಿಗೆ ₹ 7500 ಸಹಾಯಧನ ನೀಡಬೇಕು. ಅಲ್ಲದೇ ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ರದ್ದು ಮಾಡಬೇಕು. ತಿಂಗಳ ಮೊದಲ ವಾರದೊಳಗೆ ಗೌರವಧನ ಪಾವತಿಯಾಗಬೇಕು. ಬಾಕಿ ವೇತನವನ್ನು ಕೂಡಲೇ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಧರ್ಮೇಶ್, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎಂ.ಬಿ. ಪುಷ್ಪ, ಪ್ರಧಾನ ಕಾರ್ಯದರ್ಶಿ ಎಚ್.ಟಿ.ಜಯಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.