ADVERTISEMENT

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 10:23 IST
Last Updated 7 ಫೆಬ್ರುವರಿ 2018, 10:23 IST

ಹಳೇಬೀಡು: ಇಲ್ಲಿ ಫೆ. 7ರಂದು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್‌ ವೇದಿಕೆ ಸಿದ್ಧವಾಗಿದೆ. ಸಾಹಿತ್ಯ ಆಸಕ್ತರು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಸಾವಿರಾರು ಆಸನಗಳ ವ್ಯವಸ್ಥೆ ಮಾಡಲಾಗಿದೆ.

‘ಪಟ್ಟಣದಲ್ಲಿ ಎಲ್ಲಡೆ ಕೆಂಪು ಹಾಗೂ ಹಳದಿ ಬಣ್ಣದ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಮಾವಿನ ತೋರಣಗಳನ್ನು ಹಾಕಲಾಗಿದೆ. ಹೊಯ್ಸಳೇಶ್ವರ ದೇವಾಲಯ, ಜೈನಬಸದಿಗಳು ಹಾಗೂ ಅರಮನೆ ಆವರಣದ ಸಮೀಪದಲ್ಲಿ ಸಮ್ಮೇಳನ ನಡೆಯಲಿದೆ’ ಎಂದು ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎಂ.ದಯಾನಂದ್‌ ತಿಳಿಸಿದರು.

ಪಟ್ಟಣದ ರಾಜನಶಿರಿಯೂರು ವೃತ್ತದಿಂದ ಬೆಳಿಗ್ಗೆ 8ಕ್ಕೆ ಅಲಂಕೃತ ಕುದುರೆ ಸಾರೋಟಿನಲ್ಲಿ ಸಮ್ಮೇಳನ ಅಧ್ಯಕ್ಷ ಟಿ.ಎಚ್‌.ಅಪ್ಪಾಜಿಗೌಡ ಹಾಗೂ ಅವರ ಪತ್ನಿಯನ್ನು ಮೆರವಣಿಗೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಮಹಾಕವಿ ಜನ್ನ ವೇದಿಕೆಗೆ ಕರೆತರಲಾಗುವುದು. ಮೆರವಣಿಗೆಯಲ್ಲಿ 20ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ. ಮಂಗಳವಾದ್ಯಗಳೊಂದಿಗೆ, ಡೊಳ್ಳಿನ ವಾದ್ಯಗಳು ಮೆರವಣಿಗೆಗೆ ಕಳೆ ನೀಡಲಿವೆ.

ADVERTISEMENT

ಹೊಯ್ಸಳೇಶ್ವರ ಮಹಾಮಂಟಪದಲ್ಲಿ ರಾಷ್ಟ್ರಧ್ವಜ, ಪರಷತ್ತಿನ ಧ್ವಜ ಹಾಗೂ ಹಾಗೂ ನಾಡಧ್ವಜಗಳನ್ನು ಆರೋಹಣ ಮಾಡಿದ ನಂತರ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಕವಿಗೋಷ್ಠಿ ಸೇರಿದಂತೆ ಮೂರು ಗೋಷ್ಠಿಗಳು ನಡೆಯಲಿವೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ ‘ಝೀ’ ವಾಹಿನಿಯ ಸರಿಗಮಪ ಹಾಗೂ ಲಿಟ್ಲ್‌ ಚಾಂಪ್‌ ತಂಡದಿಂದ ಸಂಗೀತ ರಸಸಂಜೆ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಪ್ರೊ.ಪ್ರವೀಣ್‌ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.