ADVERTISEMENT

ಜೈನರಗುತ್ತಿ ಪಂಚಕಲ್ಯಾಣಿಕ ಮಹೋತ್ಸವ: ಮೊಳಗಿದ ವಾದ್ಯ ವೈಭವ, ಸಂಗೀತಮಯ ಹಾಡು

5ನೇ ದಿನ ಕೇವಲಜ್ಞಾನ ಕಲ್ಯಾಣಿಕ

ಎಚ್.ಎಸ್.ಅನಿಲ್ ಕುಮಾರ್
Published 4 ಡಿಸೆಂಬರ್ 2024, 6:52 IST
Last Updated 4 ಡಿಸೆಂಬರ್ 2024, 6:52 IST
ಪಂಚಕಲ್ಯಾಣಿಕದ 5ನೇ ದಿನವಾದ ಮಂಗಳವಾರ ಆದಿನಾಥ ತೀರ್ಥಂಕರರನ್ನು ತಪಸ್ಸಿಗೆ ತೆರಳುವ ಮೊದಲಿಗೆ ಆಹಾರ ದಾನಕ್ಕೆ ಕರೆದುಕೊಂಡು ಹೋಗುವ ದೃಶ್ಯ
ಪಂಚಕಲ್ಯಾಣಿಕದ 5ನೇ ದಿನವಾದ ಮಂಗಳವಾರ ಆದಿನಾಥ ತೀರ್ಥಂಕರರನ್ನು ತಪಸ್ಸಿಗೆ ತೆರಳುವ ಮೊದಲಿಗೆ ಆಹಾರ ದಾನಕ್ಕೆ ಕರೆದುಕೊಂಡು ಹೋಗುವ ದೃಶ್ಯ   

ಹಳೇಬೀಡು: ಜೈನರಗುತ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪಂಚಕಲ್ಯಾಣಿಕ ಮಹೋತ್ಸವದ 5ನೇ ದಿನ ಮಂಗಳವಾರ ತೀರ್ಥಂಕರರ ಕೇವಲಜ್ಞಾನ ಕಲ್ಯಾಣಿಕ ಸುಶ್ರಾವ್ಯವಾದ ಸಂಗೀತಮಯ ಹಾಡುಗಳು ಹಾಗೂ ಮಂತ್ರಘೋಷದೊಂದಿಗೆ ವೈಭವದಿಂದ ನಡೆಯಿತು.

ತೀರ್ಥಂಕರರಿಗೆ ಕೇವಲಜ್ಞಾನ ಆಗುವ ಸನ್ನಿವೇಶ ಪ್ರಸ್ತುತ ಪಡಿಸಿದಾಗ ನೆರೆದಿದ್ದ ಜಿನ ಭಕ್ತರಿಂದ ಘೋಷಣೆ ಮೊಳಗಿತ್ತು. ಸುಪ್ರಭಾತ, ಮಂಗಳವಾದ್ಯದೊಂದಿಗೆ ಜಿನೇಂದ್ರ ಅಭಿಷೇಕ, ಶಾಂತಿ ಧಾರೆ ನೆರವೇರಿಸಲಾಯಿತು. ನಿತ್ಯ ಪೂಜೆ ನಡೆಸಿದ ನಂತರ ಮಂಟಪದಲ್ಲಿ ತಪ ಕಲ್ಯಾಣಿಕ ಅರ್ಘ್ಯಗಳನ್ನು ಸಮರ್ಪಿಸಲಾಯಿತು. ತೀರ್ಥಂಕರ ಮುನಿಗಳು ಆಹಾರ ವಿಧಿ ನಡೆಸಿದ ನಂತರ, ಜೈನ ಮುನಿಗಳಿಂದ ನಡೆದ ಮಂಗಲ ಪ್ರವಚನವನ್ನು ಜಿನ ಭಕ್ತರು ಭಕ್ತಿಭಾವದಿಂದ ಆಲಿಸಿದರು. ಅಂಕನ್ಯಾಸ ವಿಧಿಯ ನಂತರ ಸಮವಸರಣ ಕೇವಲ ಜ್ಞಾನ ಪೂಜೆಯನ್ನು ಭಕ್ತರು ಕಣ್ತುಂಬಿಕೊಂಡರು.

ಕೇವಲಜ್ಞಾನ ಕಲ್ಯಾಣಿಕ: ‘ವೈರಾಗ್ಯದಿಂದ ದೀಕ್ಷೆ ಹೊಂದಿದ ತೀರ್ಥಂಕರರು ತಪಶ್ಚರ್ಯರಾಗುತ್ತಾರೆ. ಚಳಿ, ಮಳೆ, ಗಾಳಿ ಲೆಕ್ಕಿಸದೇ ದಿಗಂಬರನಾದ ತೀರ್ಥಂಕರ ಹಲವು ಉಪಸನಾ ರಸಪರಿತ್ಯಾಗಗಳಿಂದ ಘೋರ ತಪಸ್ಸು ಮಾಡುತ್ತಾನೆ. ತಪಸ್ಸಿನ ಫಲವಾಗಿ ನಾಲ್ಕು ಘಾತಿಕರ್ಮಗಳಾದ ಜ್ಞಾನಾವರಣ, ದರ್ಶನಾವರಣ, ಮಹೋನಾಯ, ಅಂತರಾಯಗಳನ್ನು ನಾಶ ಮಾಡಿ, ಕೇವಲಜ್ಞಾನ ಪಡೆದು ಆಚರಣೆಯನ್ನು ವಿಧಿವತ್ತಾಗಿ ನಡೆಸುವುದೇ ಕೇವಲಜ್ಞಾನ ಕಲ್ಯಾಣಿಕ’ ಎಂದು ಜಿನಧರ್ಮ ಪ್ರಭಾವಕ ವೀರಸಾಗರ ಮುನಿ ಮಹಾರಾಜ್ ಹೇಳಿದರು. 

ADVERTISEMENT

ಸಂಗೀತಗಾರರಾದ ವಿದ್ಯಾಸಾಗರ ಭಡಭಡೆ, ಪ್ರವೀಣ್ ಚೌಗ್ಲೆ ವಾದ್ಯ ತಂಡದೊಂದಿಗೆ ಜಿನಗಾಯನ ಪ್ರಸ್ತುತಪಡಿಸಿದರು.

ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಿಕದ 5ನೇ ದಿನವಾದ ಮಂಗಳವಾರ ರೂಪಿಸಿದ್ದ ಸಮವಸರಣ

ಗುರುಗಳ ಕೃಪೆಯಿಂದ ಜೈನರಗುತ್ತಿ ಪ್ರಗತಿ: ‘ವೀರಸಾಗರ ಮುನಿ ಮಹಾರಾಜರ ಪ್ರೇರಣೆಯಿಂದ ಜೈನರಗುತ್ತಿ ಅತಿಶಯ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಜೈನರಗುತ್ತಿ ಕ್ಷೇತ್ರದ ಅಭಿವೃದ್ಧಿಯ ಕೀರ್ತಿ ಚಂದ್ರಪ್ರಭ ಮುನಿ ಮಹಾರಾಜರಿಗೆ ಸಲ್ಲುತ್ತದೆ’ ಎಂದು ವೀರಸಾಗರ ಮುನಿ ಮಹಾರಾಜ್‌ ಹೇಳಿದರು.

5ನೇ ದಿನದ ಪಂಚಕಲ್ಯಾಣಿಕ ವಿಧಾನದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಾಮಾನ್ಯ ವ್ಯಕ್ತಿಯಾಗಿದ್ದ ನಮಗೆ ಆಕಾರ ಕೊಟ್ಟು ಸನ್ಮಾರ್ಗದತ್ತ ಕೊಂಡೊಯ್ದವರು ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜರು. ಅವರು ನಮಗೆ ದೀಕ್ಷೆ ಕೊಟ್ಟು ಧರ್ಮ ಕಾರ್ಯ ಮಾಡುವ ಅವಕಾಶ ಮಾಡಿದ್ದರಿಂದ ಜೈನರಗುತ್ತಿ ಕ್ಷೇತ್ರವಾಗುತ್ತಿದೆ. ಹೀಗಾಗಿ ಜೈನರಗುತ್ತಿ ಪ್ರಗತಿಗೆ ಚಂದ್ರಪ್ರಭ ಮಹಾರಾಜರೇ ಕಾರಣಕರ್ತರಾಗುತ್ತಾರೆ’ ಎಂದು ವೀರಸಾಗರ ಮುನಿ ಮಹಾರಾಜರು ಹೇಳಿದರು.

ಪಂಚಕಲ್ಯಾಣಿಕ ಸಮಿತಿ ಅಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ, ಪ್ರಧಾನ ಕಾರ್ಯದರ್ಶಿ ನೇಮಿರಾಜ ಅರಿಗ, ಕೋಶಾಧಿಕಾರಿ ಜಯೇಂದ್ರ ಕುಮಾರ್, ಉಪಾಧ್ಯಕ್ಷರಾದ ಹೊಸದುರ್ಗದ ಎಚ್.ಪಿ. ಬ್ರಹ್ಮಪಾಲ್, ಧನಪಾಲ್, ಕಾರ್ಯದರ್ಶಿಗಳಾದ ಎಂ.ಆರ್.ನಾಗೇಂದ್ರ ಪ್ರಸಾದ್, ಬ್ರಹ್ಮೇಶ್ ಜೈನ್, ಪ್ರಮುಖರಾದ ದೇವೇಂದ್ರ ಹೊಂಗೇರಿ, ಶಾಂತರಾಜು ದೇವೇಂದ್ರಪ್ಪ ಹದಳಗಿ, ಧವನ್ ಜೈನ್, ಕೀರ್ತಿಕುಮಾರ್, ಸುಷ್ಮಾ ಅರುಣ್ ಪಾಲ್ಗೊಂಡಿದ್ದರು.

ಯಾಗ ಮಂಟಪದಲ್ಲಿ ಲೋಕಕಲ್ಯಾಣಾರ್ಥ ಶಾಂತಿ ಹೋಮ ನಡೆಯಿತು

‘ಕೇವಲಜ್ಞಾನ ಕಲ್ಯಾಣಿಕ ಪ್ರಮುಖ ಘಟ್ಟ’

‘ಕೇವಲಜ್ಞಾನ ಕಲ್ಯಾಣಿಕ ಪಂಚಕಲ್ಯಾಣಿಕದ ಪ್ರಮುಖ ಘಟ್ಟ. ತೀರ್ಥಂಕರ ಮೋಕ್ಷ ಕಲ್ಯಾಣದ ಪೂರ್ವದಲ್ಲಿ ಆದಿ ತೀರ್ಥಂಕರ ಆದಿನಾಥರು ಘೋರವಾದ ತಪಸ್ಸು ಮಾಡುವ ಮುಖ್ಯವಾದ ವಿಧಾನವಾಗಿದೆ’ ಎಂದು ಸೋಂದಾ ಜೈನ ಮಠದ ಪೀಠಾಧಿಪತಿ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.  ಪಂಚಕಲ್ಯಾಣಿಕ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ‘48 ಸಂಸ್ಕಾರ ಗುಣ ದೋಷಗಳನ್ನು ನಿವಾರಿಸುವ ಕ್ರಿಯೆಯನ್ನು ನಡೆಸಲಾಯಿತು. 10 ಕರ್ಮಧಾರಣೆ ಮಾಡಲಾಯಿತು. ಆಚಾರ್ಯರು ಮುನಿಗಳ ಸಾನ್ನಿಧ್ಯದಲ್ಲಿ ನಡೆದ ಪಂಚಕಲ್ಯಾಣಿಕದಲ್ಲಿ ಭಾಗವಹಿಸುವುದು ಪುಣ್ಯದ ಕೆಲಸ’ ಎಂದು ಹೇಳಿದರು. 

ಸಮವಸರಣ ಆಕರ್ಷಣೆ
ಸಮವಸರಣ ಎಂಬುದು ಜೈನರ ಪವಿತ್ರ ಕಲೆಯಾಗಿದೆ. ಜೈನರಗುತ್ತಿ ಪಂಚಕಲ್ಯಾಣಿಕದಲ್ಲಿ ನಿರ್ಮಿಸಿದ್ದ ಸಮವಸರಣ ಆಕರ್ಷಣೆ ಜೊತೆಗೆ ಭಕ್ತಿ ಲೋಕಕ್ಕೆ ಕೊಂಡೊಯ್ಯಿತು. ‘ಸಮವಸರಣ ಎಂದರೆ ತೀರ್ಥಂಕರ ಪವಿತ್ರ ಉಪದೇಶ ಪರಿಚಯಿಸುವ ಸ್ಥಳ ಎಂದರ್ಥ. ತೀರ್ಥಂಕರರು ಕೇವಲಜ್ಞಾನ ಪಡೆದ ನಂತರ ದೇವತೆಗಳು ಸಮವಸರಣ ನಿರ್ಮಿಸುತ್ತಾರೆ ಎಂಬುದು ಜಿನ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ’ ಎಂದು ಪುರೋಹಿತರಾದ ಪ್ರವೀಣ್ ಪಂಡಿತ್ ಹಾಗೂ ಪವನ್ ಪಂಡಿತ್ ಹೇಳಿದರು.
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ಮಂಗಳವಾರ ಕೇವಲಜ್ಞಾನ ಕಲ್ಯಾಣಿಕ ಪ್ರಯುಕ್ತ ನೂತನವಾಗಿ ಪ್ರತಿಷ್ಠಾಪಿಸಿರುವ ಶೀತನಾಥ ತೀರ್ಥಂಕರ ಮೂರ್ತಿಗೆ ಜೀವಕಳೆ ತುಂಬುವ ವಿಧಾನ ನಡೆಯಿತು

ಇಂದು ಮಸ್ತಕಾಭಿಷೇಕ

‘ಡಿ.4ರಂದು ಪಂಚಕಲ್ಯಾಣಿಕ ಕೊನೆಯ ವಿಧಾನ ಮೋಕ್ಷ ಕಲ್ಯಾಣಿಕದ ನಂತರ ತೀರ್ಥಂಕರ ಮೂರ್ತಿಗಳಿಗೆ ಮಸ್ತಕಾಭಾಷೇಕ ನಡೆಯುತ್ತದೆ’ ಎಂದು ಸಮಿತಿ ಕಾರ್ಯಾಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ ಹೇಳಿದರು.

‘1008 ಕಳಸ 1 ಪ್ರಥಮ ಕಳಸ ನಾಲ್ಕು ಚತುಷ್ಕೋನ ಕಳಸದಿಂದ ಜಲಾಭಿಷೇಕ ನಡೆಯುತ್ತದೆ. ಕ್ಷೀರ ಗಂಧ ಅರಿಸಿನ ಎಳನೀರು ಕಲ್ಕಚೂರ್ಣ ಮೊದಲಾದ ದ್ರವ್ಯಗಳಿಂದ ಅಭಿಷೇಕ ನಡೆಯುತ್ತದೆ. ಆಚಾರ್ಯ ವಿಶುದ್ಧ ಸಾಗರ ಮುನಿಮಹಾರಾಜ್ ಆಚಾರ್ಯ ಚಂದ್ರಪ್ರಭ ಮುನಿಮಹಾರಾಜ್ ಜೈನಮುನಿ ವೀರಸಾಗರ ಮುನಿ ಮಹಾರಾಜ್ ಹಾಗೂ ವಿವಿಧ ಜೈನ ಮಠದ ಭಟ್ಟಾರಕರ ಸಮ್ಮುಖದಲ್ಲಿ ಮಸ್ತಕಾಭಿಷೇಕ ನಡೆಯುತ್ತಿದೆ’ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.