ADVERTISEMENT

78 ವಿಷಯಗಳಿಗೆ ಧ್ವನಿ ಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:44 IST
Last Updated 11 ಡಿಸೆಂಬರ್ 2013, 8:44 IST

ಅರಸೀಕೆರೆ: ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಕಾಂಗ್ರೆಸ್‌ ಸದಸ್ಯರ ಆರೋಪ, ಪ್ರತ್ಯಾರೋಪ ಹಾಗೂ ಮಾತಿನ ಚಕಮಕಿ ನಡುವೆ ಸೋಮವಾರ ನಡೆದ ಪುರಸಭೆಯ ಮೊದಲನೆ ಸಾಮಾನ್ಯ ಸಭೆಯಲ್ಲಿ 78 ವಿಷಯಗಳಿಗೆ ಸಂಬಂಧಿಸಿದಂತೆ ಧ್ವನಿ ಮತದಿಂದ ನಿರ್ಣಯ ಅಂಗೀಕಾರ ಪಡೆಯುವ ಮೂಲಕ ದಾಖಲೆ ನಿರ್ಮಿಸಿತು.

ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಎನ್‌. ಮೋಹನ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ,  ಕಾಂಗ್ರೆಸ್‌ ಸದಸ್ಯ ಬಿ.ಎನ್‌. ವಿದ್ಯಾಧರ್‌ ಪುರಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿ ನಾಲ್ಕು ತಿಂಗಳು ಕಳೆದರೂ ಇದುವರೆಗೂ ಪಟ್ಟಣದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಒಳಗೊಂಡಂತೆ ಸ್ವಚ್ಛತೆ ಇನ್ನಿತರೆ ಸಮಸ್ಯೆಗಳಿಂದ ಜನತೆ ರೋಸಿ ಹೋಗಿ ನೂತನ ಸದಸ್ಯರಿಗೆ ಹಿಡಿಶಾಪ ಹಾಕುವಂತಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸದಸ್ಯರಾದ ಹಾಜೀವಾಲಿ ಹಾಗೂ ಗೀತಾ ಸುನಿಲ್‌ ಧನಿಗೂಡಿಸಿದರು.

ವಿರೋಧ ಪಕ್ಷದ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಆಡಳಿತ ಪಕ್ಷದ ಎಂ. ಶಮೀವುಲ್ಲಾ ಹಾಗೂ ಪಂಚಾಕ್ಷರೀ ಅವರು ವಿರೋಧಿ ಸದಸ್ಯರು ಮಾಡುತ್ತಿರುವ ಆರೋಪದಲ್ಲಿ ಎಳ್ಳಷ್ಟು ಹುರುಳಿಲ್ಲ. ಟೀಕೆಗೋಸ್ಕರ ಆರೋಪ ಮಾಡಬಾರದು. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನು ತಲೆದೋರಿಲ್ಲ. ಅಲ್ಲದೆ ಸ್ವಚ್ಛತೆ ಬಗ್ಗೆ ಪೌರ ಕಾರ್ಮಿಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನಿತರೆ ಸಮಸ್ಯೆಗಳು ಅಷ್ಟಾಗಿ ಜನರನ್ನು ಕಾಡುತ್ತಿಲ್ಲ  ಎಂದರು.

ಆಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ  ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಪ್ರಜಾಪ್ರಭುತ್ವ ನಿಯಮದಡಿ  ಸಭೆ ನಡೆಸಿ, ಆಡಳಿತ ಹಾಗೂ ವಿರೋಧಿ ಸದಸ್ಯರು ಪಟ್ಟಣದ ಅಭಿವೃದ್ಧಿ ಹಾಗೂ ಜನರ ಸಮಸ್ಯೆ ಕುರಿತು ಆರೋಗ್ಯ ಪೂರ್ಣ ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿ ಕ್ರಮಕೈಗೊಂಡಾಗ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಸಮರ್ಪಕ ಪರಿಹಾರ ದೊರೆಯುತ್ತದೆ ಎಂದರು.

ಆಗಲೂ ಗದ್ದಲ ನಡೆಯುತ್ತಿದ್ದರಿಂದ ತಾವು ಸಭೆಯಿಂದ ನಿರ್ಗಮಿಸುವುದಾಗಿ ತಿಳಿಸಿ ಹೊರಡಲು ಅಣಿಯಾಗುತ್ತಿದ್ದಂತೆ  ಕೆಲ ಸದಸ್ಯರು ಶಾಸಕರ ಮನವೊಲಿಸಿ ಸಭೆಯಲ್ಲಿ ಇದ್ದು ಕಲಾಪ ಸುಗುಮವಾಗಿ ನಡೆಯುವಂತೆ ಅನುವು ಮಾಡಿ ಎಂದು ಮನವಿ ಮಾಡಿದರು. ಆಗ ಸಭೆ ಮತ್ತೆ ಮುಂದುವರಿಯಿತು.

ಕಾಂತ್‌ರಾಜ್‌,  ಗೀತಾ, ಪಾರ್ಥ ಸಾರತಿ, ಬಾಲ ಮುರುಗನ್‌, ರಂಗನಾಥ್‌,  ಅನ್ನಪೂರ್ಣ, ಬಬ್ರು ವಾಹನ  ಚರ್ಚೆಯಲ್ಲಿ ಪಾಲ್ಗೊಂಡಿ ದ್ದರು. ಉಪಾಧ್ಯಕ್ಷೆ ಭಾಗ್ಯಲತಾ ಮಂಜುನಾಥ್‌, ಮುಖ್ಯಾಧಿಕಾರಿ ಕೆ.ಎಂ. ಸತ್ಯ ನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.