ADVERTISEMENT

Covid-19: 9,102 ಮಂದಿಗೆ ಲಸಿಕೆ ಗುರಿ

ಎರಡನೇ ಹಂತದ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 12:37 IST
Last Updated 8 ಫೆಬ್ರುವರಿ 2021, 12:37 IST
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎರಡನೇ ಹಂತದ ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡರು.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎರಡನೇ ಹಂತದ ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡರು.   

ಹಾಸನ:ಆರೋಗ್ಯ ಸಿಬ್ಬಂದಿಗಳೆಲ್ಲರೂ ಯಾವುದೇ ಆತಂಕವಿಲ್ಲದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಎರಡನೇ ಹಂತದ ಕೋವಿಡ್ ರೋಗ ನಿರೋಧ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಾನು ಸಹ ಲಸಿಕೆ ಹಾಕಿಸಿಕೊಂಡಿದ್ದು, ಇಲ್ಲಿಯವರೆಗೂ
ಯಾವುದೇ ಅಡ್ಡ ಪರಿಣಾಮಗಳು ಬಂದಿಲ್ಲ. ಹಾಗಾಗಿ ಪೌರಕಾರ್ಮಿಕರು, ಗ್ರಾಮ ಪಂಚಾಯಿತಿ ನೌಕರರು,
ಇತರೆ ಆರೋಗ್ಯ ಸಿಬ್ಬಂದಿ ಹಿಂಜರಿಯದೆ ಲಸಿಕೆ ಹಾಕಿಸಿಕೊಳ್ಳಿ’ ಎಂದು ತಿಳಿಸಿದರು.

ಮೂರು ದಿನಗಳಲ್ಲಿ ಹಿಮ್ಸ್ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ
ಸೇರಿದಂತೆ ಒಟ್ಟು 23 ಸ್ಥಳಗಳಲ್ಲಿ ಕೋವಿಡ್ ಲಸಿಕೆ ಹಾಕಲಾಗುತ್ತದೆ. ಎರಡನೇ ಅಲೆ ಬರುವುದಕಿಂತ ಮುಂಚೆಯೇ ಲಸಿಕೆ ತೆಗೆದುಕೊಂಡು ಎಲ್ಲರೂ ಸಬಲರಾಗೋಣ ಎಂದು ಹೇಳಿದರು.

ADVERTISEMENT

ಎರಡನೇ ಹಂತದಲ್ಲಿ ಕಂದಾಯ, ಗೃಹರಕ್ಷಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಸೇರಿ 9,102 ಫಲಾನುಭವಿಗಳು ಹೆಸರು ನೋಂದಾಯಿಸಿದ್ದು, ನಿತ್ಯ 2,500 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸೋಮವಾರ 681 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ‌ ಎಂದು ಕೋವಿಡ್‌ ಲಸಿಕಾ ನೋಡಲ್‌ ಅಧಿಕಾರಿ ಕಾಂತರಾಜ್‌ ತಿಳಿಸಿದರು.

ಮಂಗಳವಾರ ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಜಿಲ್ಲಾಸ್ಪತ್ರೆ, ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಮೂರು ಸಾವಿರ ಫಲಾನುಭವಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿಮ್ಸ್ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್, ಜಿಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ. ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ಆರ್.ಸಿ.ಎಚ್. ಡಾ.
ಕಾಂತರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.