ADVERTISEMENT

ಹೊಳೆನರಸೀಪುರ: ಸಮಸ್ಯೆಗಳ ಆಗರ ವಿದ್ಯುತ್ ನಗರ

ಡಾಂಬರು ಕಾಣದ ಮುಖ್ಯರಸ್ತೆ: ಕುಸಿದು ಬಿದ್ದಿರುವ ಚರಂಡಿ ಕಲ್ಲು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 1:36 IST
Last Updated 11 ಫೆಬ್ರುವರಿ 2021, 1:36 IST
ವಿದ್ಯುತ್ ನಗರ ಬಡಾವಣೆಯ ನೋಟ
ವಿದ್ಯುತ್ ನಗರ ಬಡಾವಣೆಯ ನೋಟ   

ಹೊಳೆನರಸೀಪುರ: ಪಟ್ಟಣದ ಬಡಾವಣೆಗಳಲ್ಲಿ ಒಂದಾದ ವಿದ್ಯುತ್‌ ನಗರ ಸಮಸ್ಯೆಗಳ ಆಗರವಾಗಿದೆ. ಡಾಂಬರು ಕಾಣದ ಮುಖ್ಯರಸ್ತೆ, ಕುಸಿದು ಬಿದ್ದಿರುವ ಚರಂಡಿ ಕಲ್ಲುಗಳು, ಜನರನ್ನು ಸ್ವಾಗತಿಸುವ ಕಸದ ರಾಶಿ.

ಇದು ಪಟ್ಟಣದ ವಿದ್ಯುತ್‌ ನಗರದ ಸ್ಥಿತಿ.ಈ ಬಡಾವಣೆ 1997ರಲ್ಲಿ ನಿರ್ಮಿಸಿದ್ದು, ಸುಮಾರು 112 ಮನೆಗಳಿದೆ. ಸೆಸ್ಕ್‌ ಸಿಬ್ಬಂದಿ ಸೇರಿದಂತೆ ಇತರೆ ಇಲಾಖೆಗಳ ನೌಕರರು ಸಹ ಇಲ್ಲಿ ವಾಸವಾಗಿದ್ದಾರೆ. ಇಲ್ಲಿನ ಮುಖ್ಯರಸ್ತೆ ದಶಕಗಳಿಂದ ಡಾಂಬರು ಕಂಡಿಲ್ಲ.

ಹದಗಟ್ಟ ರಸ್ತೆಯಲ್ಲಿ ಜನರು ಸಂಚರಿಸಬೇಕು. ಕುಡಿಯುವ ನೀರಿಗೆ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಆದರೆ, ಇಲ್ಲಿನ ಚರಡಿಗಳ ಸ್ಥಿತಿ ಶೋಚನೀಯವಾಗಿದೆ.

ADVERTISEMENT

ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯುವುದಿಲ್ಲ. ಗಲೀಜು ನೀರು ನಿಂತುಸೊಳ್ಳೆಗಳ ತಾಣವಾಗಿದೆ. ಕೆಲ ಕಡೆಗಳಲ್ಲಿ ಚರಂಡಿ ಕಲ್ಲುಗಳು ಬಿದ್ದು ಹೋಗಿವೆ. ಪುರಸಭೆ ವ್ಯಾಪ್ತಿಗೆ ಸೇರಿದ್ದರೂ ಈ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ವಾರಕ್ಕೊಮ್ಮೆ ಸಹ ಸ್ವಚ್ಛಗೊಳಿಸುವುದಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಕಾಣಬಹುದು.

‘ಬೀದಿ ದೀಪಗಳು ಕೆಟ್ಟು, ಹಲವು ದಿನಗಳು ಕಳೆದರೂ ದುರಸ್ತಿಯಾಗಿಲ್ಲ. ವಾರ್ಡ್‌ 1ರ ಸದಸ್ಯೆ ಸುಧಾ ನಳಿನಿ ಅವರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ದೂರು ನೀಡಿದ ದಿನ ಪುರಸಭೆ ಪೌರಕಾರ್ಮಿಕರು ಕಸ ತೆಗೆದುಕೊಂಡು ಹೋದರು. ನಂತರ ಬರಲಿಲ್ಲ’ ಎಂದು ನಿವಾಸಿಗಳು ದೂರುತ್ತಾರೆ.

‘ಈ ಬಡಾವಣೆಗೆ ರೈಲ್ವೆ ಹಳಿ ದಾಟಿ ಹೋಗಬೇಕು. ರೈಲು ಸಂಚಾರ ವೇಳೆ ಗೇಟ್ ಹಾಕಲಾಗುತ್ತದೆ. ಇದರಿಂದಾಗಿ ಹಲವು ಬಾರಿ 10–20 ನಿಮಿಷ ಕಾಯುವ ಅನಿವಾರ್ಯತೆ ನಿರ್ಮಾಣ ಆಗುತ್ತದೆ. ಆದ್ದರಿಂದ ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕು’ ಎಂದು ಬಡಾವಣೆಯ ನಿವಾಸಿ ಮಂಜು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.