ಕೊಣನೂರು: ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶುಕ್ರವಾರ ವೈಕುಂಠ ಏಕಾದಶಿಯ ಅಂಗವಾಗಿ ವೆಂಕಟರಮಣಸ್ವಾಮಿ ದೇವಾಲಯ ಸಂರಕ್ಷಣಾ ಸಮಿತಿಯ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ, ಹೋಮಹವನಾದಿಗಳು ನೆರವೇರಿದವು.
ದೇವಾಲಯದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಗಣಪತಿ, ಪದ್ಮಾವತಿ ಮತ್ತು ವೆಂಟರಮಣಸ್ವಾಮಿಯ ಮೂರ್ತಿಗಳನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪಂಚಾಮೃತ ಅಭಿಷೇಕ, ಮಹಾಭಿಷೇಕ ನೆರವೇರಿಸಲಾಯಿತು. 11 ಗಂಟೆಯಿಂದ ಗಣಪತಿ, ಲಕ್ಷ್ಮೀ ಹಾಗೂ ವಿಷ್ಣು ಹೋಮವನ್ನು ಕೈಗೊಂಡು ಪೂರ್ಣಾಹುತಿ ನೀಡಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು.
ದೇವಾಲಯಕ್ಕೆ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮಧ್ಯಾಹ್ನದ ನಂತರ ದೇವಾಲಯದಲ್ಲಿರುವ ಗಣಪತಿ ಮತ್ತು ಪದ್ಮಾವತಿ ದೇವರನ್ನು ಬೆಣ್ಣೆ, ಒಣಹಣ್ಣುಗಳಿಂದ ಹಾಗೂ ವೆಂಕಟರಮಣಸ್ವಾಮಿಯ ಮೂಲಮೂರ್ತಿಗಳನ್ನು ಕಡಲೆಬೀಜದಿಂದ ಅಲಂಕರಿಸಿದ್ದು ಭಕ್ತರ ಮನಸೂರೆಗೊಂಡಿತು. ಸಂಜೆ ವಿಶೇಷವಾಗಿ ಅಲಂಕರಿಸಿದ್ದ ಸಪ್ತದ್ವಾರಗಳ ಮೂಲಕ ಭಕ್ತರಿಗೆ ದೇವರದರ್ಶನ ಮಾಡಲು ಅವಕಾಶ ಮಾಡಿಕೊಡಲಾಯಿತು.
ಗೋವಾ ನಗರದ ಮುಖ್ಯಯೋಜನಾಕಾರಿ ಎಸ್.ಟಿ.ಪುಟ್ಟರಾಜು, ವೈಎಸ್ಆರ್ ಗ್ರೂಪ್ಸ್‌ನ ಉದ್ಯಮಿ ಎಸ್.ಟಿ. ಕೃಷ್ಣೇಗೌಡ, ರುಕ್ಮಿಣಿ ರಾಮೇಗೌಡ, ಜಿ.ಕೆ.ಲೋಕೇಶ್, ಸಮಿತಿಯವರು, ಗ್ರಾ.ಪಂ ಸದಸ್ಯರು, ಗ್ರಾಮದ ಮತ್ತು ಸುತ್ತಮುತ್ತಲ ಗ್ರಾಮದ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.