
ಕೊಣನೂರು: ಅರಕಲಗೂಡು ತಾಲ್ಲೂಕಿಗೆ ಕೈಗಾರಿಕಾ ಪ್ರದೇಶವನ್ನು ತರುವ ಮೂಲಕ ಇಲ್ಲಿನ ವಿದ್ಯಾವಂತ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವುದು ನನ್ನ ಗುರಿಯಾಗಿದೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ತಿಳಿಸಿದರು.
ಕೊಣನೂರಿನ ಚರ್ಚ್‌ನಲ್ಲಿ 2026ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅರಕಲಗೂಡು ತಾಲ್ಲೂಕಿನಲ್ಲಿ ಶೇ 99.74 ಗುರಿ ಸಾಧಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ₹ 270 ಕೋಟಿ, ಅನ್ನಭಾಗ್ಯದಲ್ಲಿ ₹ 89 ಕೋಟಿ, ಶಕ್ತಿ ಯೋಜನೆಯಡಿ ₹121 ಕೋಟಿ, ಗೃಹಜ್ಯೋತಿ ಅಡಿ ₹ 41 ಕೋಟಿ ಮತ್ತು ಯುವ ನಿಧಿ ಯೋಜನೆಯಡಿ 700 ಯುವಕರಿಗೆ ₹ 3 ಕೋಟಿ ದೊರೆತಿದೆ’ ಎಂದರು.
‘ಹಳ್ಳಿಮೈಸೂರನ್ನು ತಾಲ್ಲೂಕು ಕೇಂದ್ರವನ್ನಾಗಿಸುವುದು, ರಂಗೇನಹಳ್ಳಿ ಮತ್ತು ಗುಡ್ಡೇನಹಳ್ಳಿ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು, ಈ ಭಾಗದ ರೈತರ ಕೃಷಿ ಬದುಕನ್ನು ಆದಾಯದತ್ತ ಕೊಂಡೊಯ್ಯುವುದು’ ನನ್ನ ಆಶಯ ಎಂದರು.
ಕೊಣನೂರು ಮತ್ತು ರಾಮನಾಥಪುರ ಭಾಗದಲ್ಲಿ ನೀರಾವರಿ ಸೌಲಭ್ಯವಿದ್ದು, ಸಕ್ಕರೆ ಕಾರ್ಖಾನೆ ಆರಂಭಿಸಲು ಹೆಚ್ಚಿನ ಅವಕಾಶಗಳಿವೆ. ಶುಂಠಿ, ತಂಬಾಕು ಬೆಳೆಗಳ ಜೊತೆಗೆ ಕಬ್ಬು ಆರ್ಥಿಕ ಬೆಳೆಯನ್ನಾಗಿಸುವ ಸಾಧ್ಯತೆಯಿದ್ದು, ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಯೊಂದು ಪ್ರಾರಂಭವಾಗುವಂತೆ ಮಾಡಿ, ರೈತರ ಸಹಕಾರಕ್ಕೆ ನಿಲ್ಲುವುದರ ಜೊತೆಗೆ ಈ ಭಾಗದ ಅನೇಕರಿಗೆ ಉದ್ಯೋಗ ಒದಗಿಸುವುದು ನನ್ನ ಆಲೋಚನೆಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಸೊಮಶೇಖರ್, ಕೃಷಿ ಪತ್ತಿನ ಸಂಘದ ನಿರ್ದೇಶಕ ಪ್ರವೀಣ್, ಮುಖಂಡ ಶಹಾಬಾಜ್, ಸ್ಥಳೀಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.