ADVERTISEMENT

ಕಸ ಎಸೆಯುವ ಜಾಗದಲ್ಲಿ ಗಿಡ: ಶುಚಿತ್ವ ಕಾಪಾಡಲು ಆಲೂರು ಪುರಸಭೆಯಿಂದ ವಿನೂತನ ಕ್ರಮ

ಎಂ.ಪಿ.ಹರೀಶ್
Published 4 ಫೆಬ್ರುವರಿ 2026, 6:36 IST
Last Updated 4 ಫೆಬ್ರುವರಿ 2026, 6:36 IST
ಆಲೂರಿನಲ್ಲಿ ಕಸವಿದ್ದ ಸ್ಥಳವನ್ನು ಶುಚಿಗೊಳಿಸಿ ಗಿಡ ನೆಡುತ್ತಿರುವ ಪುರಸಭೆ ಸಿಬ್ಬಂದಿ
ಆಲೂರಿನಲ್ಲಿ ಕಸವಿದ್ದ ಸ್ಥಳವನ್ನು ಶುಚಿಗೊಳಿಸಿ ಗಿಡ ನೆಡುತ್ತಿರುವ ಪುರಸಭೆ ಸಿಬ್ಬಂದಿ   

ಆಲೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿ ಕೆಲವರು ಕಸ ಎಸೆಯುತ್ತಿದ್ದುದನ್ನು ಗಮನಿಸಿದ ಮುಖ್ಯಾಧಿಕಾರಿ ಹಾಗೂ ತಂಡದವರು, ಕಸವಿದ್ದ ಸ್ಥಳವನ್ನು ಶುಚಿಗೊಳಿಸಿ, ಆ ಸ್ಥಳದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದು ಸಾರ್ವಜನಿಕರಲ್ಲಿ ತಿಳಿವಳಿಕೆಯ ಜೊತೆಗೆ ಎಚ್ಚರಿಕೆಯನ್ನೂ ನೀಡುತ್ತಿದೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಿತ್ಯ ಪ್ರತಿ ಮನೆ ಬಳಿಗೆ ಕಸದ ವಾಹನ ಬರುತ್ತದೆ. ಅದರಲ್ಲಿ ಹಸಿ ಮತ್ತು ಒಣ ಕಸವೆಂದು ವಿಂಗಡಿಸಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದು, ನಿಗದಿಪಡಿಸಿರುವ ಕಾಂಪೋಸ್ಟ್ ಗುಂಡಿಗೆ ಹಾಕಿ ಗೊಬ್ಬರ ತಯಾರಿಸುತ್ತಾರೆ.

ಆದರೆ ಬಹುತೇಕ ವಿದ್ಯಾವಂತ ನಾಗರೀಕರು, ತಮ್ಮ ಮನೆ ಬಳಿಗೆ ಕಸದ ವಾಹನ ಬಂದಾಗ ಕಸ ಕೊಡಲು ಸಾಧ್ಯವಾಗದೇ, ತಾವು ಶಾಲೆ, ಕಾಲೇಜು, ಕಚೇರಿಗೆ ಹೋಗುವ ಸಂದರ್ಭದಲ್ಲಿ ರಸ್ತೆಯಂಚಿನಲ್ಲಿ ಬಿಸಾಡಿ ಹೋಗುತ್ತಾರೆ.

ADVERTISEMENT

ಅಲ್ಲಲ್ಲಿ ಬಿಸಾಡಿದ ಕಸವನ್ನು ಸಂಗ್ರಹಿಸುತ್ತಿದ್ದ ಪಂಚಾಯಿತಿ ಸಿಬ್ಬಂದಿ, ಇಲ್ಲಿ ಕಸ ಹಾಕಿದರೆ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂಬ ನಾಮಫಲಕ ಹಾಕಿದರೂ ಪ್ರಯೋಜನ ಆಗುತ್ತಿಲ್ಲ. ಇದರಿಂದ ಕಸ ವಿಲೇವಾರಿ ಸಮಸ್ಯೆ ಉಲ್ಬಣಿಸುತ್ತಿದೆ ಎನ್ನುವುದು ಪುರಸಭೆ ಸಿಬ್ಬಂದಿಯ ಮಾತು.

ಇದನ್ನರಿತ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ತಮ್ಮ ತಂಡದೊಂದಿಗೆ ಕಸ ವಿಲೇವಾರಿ ಮಾಡಿ, ಆ ಸ್ಥಳದಲ್ಲಿ ಗಿಡಗಳನ್ನು ನೆಡಲು ಮುಂದಾಗಿದ್ದಾರೆ. ಭವಿಷ್ಯ ಅರಿಯದ ಅನಾಗರಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಂಜುನಾಥ್
ಬಿ. ಮಂಜೇಗೌಡ

Quote - ಅಲ್ಲಲ್ಲಿ ಕಸ ಎಸೆಯುತ್ತಿದ್ದ ಸ್ಥಳ ಶುಚಿಗೊಳಿಸಿ ಆ ಸ್ಥಳದಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ಗೌಪ್ಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಸ ಬಿಸಾಡಿದವರನ್ನು ಗುರುತಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಮಂಜುನಾಥ್ ಪ.ಪಂ. ಮುಖ್ಯಾಧಿಕಾರಿ

Quote - ಬಹುತೇಕ ವಿದ್ಯಾವಂತರೆ ರಸ್ತೆಗಳಲ್ಲಿ ಕಸ ಬಿಸಾಡುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಗಿಡಗಳನ್ನು ನೆಡುತ್ತಿರುವುದು ಶುಚಿತ್ವಕ್ಕೆ ಉತ್ತಮ ಸಂಕೇತ. ಇದಕ್ಕೆ ನಾಗರಿಕರು ಸ್ಪಂದಿಸಬೇಕು. ಕಸ ಬಿಸಾಡಿದವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು. ಬಿ. ಮಂಜೇಗೌಡ ಆಲೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.