
ಪುಷ್ಪಾ ಅರುಣ್‌ಕುಮಾರ್
ಹಾಸನ: ನಗರದ ವಿವಾದಿತ ನಿವೇಶನವು ತಮಗೆ ಸೇರಿದ್ದೋ ಅಥವಾ ದೇವರಾಜು ಅವರಿಗೆ ಸೇರಿದ್ದೋ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ನ್ಯಾಯಾಲಯವು ಅವಕಾಶ ನೀಡಿದೆ ಎಂದು ನಟ ಯಶ್ ತಾಯಿ ಪುಷ್ಪಾ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ನಮಗೂ ವಾದ ಮಂಡಿಸಲು ಅವಕಾಶ ಕೊಟ್ಟಿದೆ. ಮುಂದಿನ ದಿನಗಳಲ್ಲಿ ನಿವೇಶನ ಯಾರಿಗೆ ಸೇರಿದೆ ಎಂಬುದನ್ನು ನ್ಯಾಯಾಲಯವೇ ಸ್ಪಷ್ಟಪಡಿಸುತ್ತದೆ ಎಂಬ ನಂಬಿಕೆ ಇದೆ. ಅವರು ಹೇಳುತ್ತಿರುವ ಜಾಗ ಬೇರೆ. ನಾವು ಮೊದಲಿನಿಂದಲೂ ಹೇಳುತ್ತಿರುವುದು ಇದೇ ನಮ್ಮ ಜಾಗ ಎಂದು ಹೇಳಿದರು.
ಪುಷ್ಪಾ ಅರುಣ್‌ಕುಮಾರ್
‘ನಮ್ಮ ಹೆಸರು ಮತ್ತು ವಿಳಾಸವನ್ನು ದಾಖಲೆಗಳಲ್ಲಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ನ್ಯಾಯಾಲಯದ ಮೇಲೆ ನಮ್ಮ ನಂಬಿಕೆ ಮತ್ತಷ್ಟು ಬಲವಾಗಿದೆ. ನಾವು ಯಾವುದೇ ನಕಲಿ ದಾಖಲೆ ಸಲ್ಲಿಸಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಕ್ಕೆ ತಂದಿದೆ’ ಎಂದರು.
ದೇವರಾಜು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಬೇರೆ ಜಾಗವನ್ನು ತಂದು, ಈ ಜಾಗ ನಮ್ಮದು ಎಂದು ಜಗಳ ಮಾಡಿದ್ದಾರೆ. ನಾವು ಈ ಜಾಗವನ್ನು ಮಾರಾಟ ಅಥವಾ ಬಾಡಿಗೆಗೆ ನೀಡಿಲ್ಲ. ಸ್ವಂತ ಬಳಕೆಗೆ ಉಪಯೋಗಿಸುತ್ತಿದ್ದೇವೆ. ಇದು ನಮ್ಮದೇ ಜಾಗ ಆಗಿರುವುದರಿಂದ ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಾನೂನು ಪ್ರಕಾರ ನಿವೇಶನ ಪಡೆದಿದ್ದು, ಸರ್ಕಾರಕ್ಕೆ ಅಗತ್ಯ ಶುಲ್ಕ ಪಾವತಿಸಲಾಗಿದೆ. ಆದರೂ ಏಕಾಏಕಿ ಜೆಸಿಬಿ ತಂದು ಕಾಂಪೌಂಡ್ ತೆರವುಗೊಳಿಸಿರುವುದು ಆಘಾತಕಾರಿ. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಈ ವೇಳೆ ಪೊಲೀಸರು ನಮಗೆ ಬೆಂಬಲ ನೀಡಿಲ್ಲ ಎಂದು ಆರೋಪಿಸಿದರು.
ಬಡಾವಣೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ್ ಸ್ಪಂದಿಸಿಲ್ಲ. ಈ ಕುರಿತು ಎಸ್ಪಿಗೆ ದೂರು ನೀಡುತ್ತೇನೆ. ಜೆಸಿಬಿಯನ್ನು ಇನ್ನೂ ಸೀಜ್ ಮಾಡಿಲ್ಲ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಲೇಬೇಕು. ಈ ವಿಚಾರವನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ. ಸುಲಭವಾಗಿ ಬಿಡುವುದಿಲ್ಲ. ಇಲ್ಲಿ ನ್ಯಾಯ ಸಿಗದಿದ್ದರೆ ಮೇಲಧಿಕಾರಿಗಳ ಬಳಿ ಹೋಗಿ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು.
ಇದು ನನ್ನೊಬ್ಬಳ ವಿಷಯವಲ್ಲ, ಜನಸಾಮಾನ್ಯರ ವಿಷಯ. ಕಾಂಪೌಂಡ್ ಜೊತೆಗೆ ನಮ್ಮ ಮನೆಗೂ ಹಾನಿಯಾಗಿದೆ. ಯಶ್ ತಾಯಿ ಜಾಗ ಒತ್ತುವರಿ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಲಾಗಿದೆ. ನನಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇನೆ ಎಂದು ಪುಷ್ಪಾ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.