
ಅರಕಲಗೂಡು: ಕೃಷಿ ನೀತಿಗಳನ್ನು ಸರಿಯಾಗಿ ರೂಪಿಸಿದರೆ ದೇಶದ ಯಾವೊಬ್ಬ ರೈತನು ಬಡತನದಿಂದ ಇರಲಾರ. ನಮ್ಮ ದೇಶದ ಕೃಷಿ ನೀತಿಗಳೇ ನಮ್ಮ ರೈತರನ್ನು ಇಂದಿಗೂ ಬಡವರನ್ನಾಗಿ ಮಾಡಿವೆ ಎಂದು ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಕೃಷಿಕ ಎಂ.ಸಿ.ರಂಗಸ್ವಾಮಿ ಹೇಳಿದರು.
ತಾಲ್ಲೂಕಿನ ದೊಡ್ಡ ಮಗ್ಗೆ ಗ್ರಾಮದ ಮಗ್ಗೆ ಮನೆ ಆವರಣದಲ್ಲಿ ಮಂಗಳವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್, ಹಾಸನದ ಎಂ.ಜಿ. ರಸ್ತೆ ಹಾಗೂ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ಹೊರ ರಾಷ್ಟ್ರಗಳಲ್ಲಿ ಅತ್ಯುತ್ತಮ ಬೇಡಿಕೆ ಇದೆ. ಆಳ್ವಿಕೆ ಮಾಡುವ ಸರ್ಕಾರಗಳು ರೈತರ ಪರವಾದ ನೀತಿಗಳನ್ನು ರೂಪಿಸಿದರೆ, ಪ್ರತಿಯೊಬ್ಬ ರೈತನು ಕೃಷಿಯಲ್ಲಿ ಆರ್ಥಿಕವಾಗಿ ಸದೃಢರಾಗಬಹುದು. ಕೃಷಿ ಕ್ಷೇತ್ರ ಇಂದು ಯಾರಿಗೂ ಬೇಡವಾದ ಕ್ಷೇತ್ರವಾಗಿದ್ದು, ಅದರಲ್ಲೂ ಯುವ ಸಮೂಹ ಕೃಷಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ, ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ್ ಬಿ.ಕೆ. ಮಾತನಾಡಿ, ‘ಯುವತಿಯರು ರೈತರನ್ನು ಮದುವೆಯಾಗಲು ಇಂದು ಹಿಂಜರಿಕೆ ಮಾಡಿಕೊಳ್ಳುತ್ತಾರೆ. ಅಂತಹ ಸ್ಥಿತಿಗೆ ಕೃಷಿ ಕ್ಷೇತ್ರ ಬಂದಿದೆ. ನಮ್ಮೊಳಗೆ ಇದ್ದು, ಇಷ್ಟೆಲ್ಲ ಸಾಧನೆ ಮಾಡಿದರೂ ಏನನ್ನು ಹೇಳಿಕೊಳ್ಳದೇ ಸರಳವಾಗಿ ಬದುಕುತ್ತಿರುವ ಎಂ.ಸಿ. ರಂಗಸ್ವಾಮಿ ಅವರು ಯುವ ಸಮುದಾಯಕ್ಕೆ ಆದರ್ಶವಾಗಿದ್ದಾರೆ’ ಎಂದರು.
ಎಂ.ಜಿ. ರಸ್ತೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ. ಕವಿತಾ, ಆರ್.ಸಿ. ರಸ್ತೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ, ಅಧ್ಯಾಪಕರಾದ ಜಿ.ಆರ್. ಮೋಹನ್, ನಂದನ್, ಮನೋಹರ್, ಯೋಗೇಶ್, ಉಪನ್ಯಾಸಕರಾದ ದಿಲೀಪ್ ಕುಮಾರ್, ರವಿ ಕುಮಾರ್, ಕಾವ್ಯಾ, ರೋಟರಿ ಸಹಾಯಕ ಗವರ್ನರ್ ಮಂಜುನಾಥ್, ರೋಟರಿ ರಾಯಲ್‍ನ ಸದಸ್ಯ ಸಚ್ಚಿನ್, ಚೇತನ್, ವಿದ್ಯಾರ್ಥಿನಿಯರು ಹಾಜರಿದ್ದರು.
‘ಶಿಕ್ಷಣದೊಂದಿಗೆ ಕೃಷಿಯೂ ಜೊತೆಗೂಡಲಿ’
‘ಕೃಷಿ ಕಾಯಕದಲ್ಲಿ ಮಹಿಳೆಯರ ಪಾತ್ರವೇ ಅತೀ ಮುಖ್ಯ. ಸ್ತ್ರೀಯರು ಕೃಷಿ ಕಾಯಕದ ಜೊತೆ ಕೃಷಿ ಕಾರ್ಯಗಳ ನಿರ್ವಹಣೆಯಲ್ಲಿ ಪಾಲ್ಗೊಂಡರೆ ಯಶಸ್ಸು ಸಾಧ್ಯ. ಕೃಷಿ ಪ್ರಧಾನ ಈ ರಾಷ್ಟ್ರದಲ್ಲಿ ಸ್ತ್ರೀಯರಿಂದಾಗಿಯೇ ಕೃಷಿ ಕಾರ್ಯಗಳು ಇನ್ನೂ ಜೀವಂತವಾಗಿವೆ. ಪುರುಷರು ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದು ಕಡಿಮೆ. ಹೆಣ್ಣು ಮಕ್ಕಳು ಕೃಷಿಯಲ್ಲಿ ನಿರ್ವಹಣೆಯ ಬಗ್ಗೆ ತಿಳಿದುಕೊಂಡರೆ ಹೆಚ್ಚು ಅನುಕೂಲವಾಗಲಿದ್ದು ಶಿಕ್ಷಣದೊಂದಿಗೆ ಕೃಷಿ ಮಾಡುವ ಮನಸ್ಥಿತಿ ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಕೃಷಿಕ ಎಂ.ಸಿ.ರಂಗಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.