ADVERTISEMENT

‘ಕೃಷಿ, ಉದ್ಯಮಕ್ಕೆ ರೈತರಿಗೆ ಸಾಲ ಲಭ್ಯ’

ಎಸ್‌ಬಿಐ ಕಿಸಾನ್ ದಿವಸ್, ಅನ್ನದಾತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:30 IST
Last Updated 21 ಡಿಸೆಂಬರ್ 2025, 4:30 IST
ಜಾವಗಲ್ ಗ್ರಾಮದ ಎಸ್‌ಬಿಐ ಶಾಖೆಯಿಂದ ಕಿಸಾನ್ ದಿವಸ್ ಅಂಗವಾಗಿ ಗ್ರಾಮದ ಪ್ರಗತಿಪರ ರೈತರಾದ ಜವರೇಗೌಡ, ಮಾಲತಿ ಸಂಗಮೇಶ್, ಧನಂಜಯಪುರದ ರೈತ ಡಿ.ಪಿ. ಗಿರಿ ಗೌಡ, ತಿಮ್ಮನಹಳ್ಳಿ ಹರೀಶ್ ಹಾಗೂ ಸಂಗಮೇಶ ಅವರನ್ನು ಸನ್ಮಾನಿಸಲಾಯಿತು 
ಜಾವಗಲ್ ಗ್ರಾಮದ ಎಸ್‌ಬಿಐ ಶಾಖೆಯಿಂದ ಕಿಸಾನ್ ದಿವಸ್ ಅಂಗವಾಗಿ ಗ್ರಾಮದ ಪ್ರಗತಿಪರ ರೈತರಾದ ಜವರೇಗೌಡ, ಮಾಲತಿ ಸಂಗಮೇಶ್, ಧನಂಜಯಪುರದ ರೈತ ಡಿ.ಪಿ. ಗಿರಿ ಗೌಡ, ತಿಮ್ಮನಹಳ್ಳಿ ಹರೀಶ್ ಹಾಗೂ ಸಂಗಮೇಶ ಅವರನ್ನು ಸನ್ಮಾನಿಸಲಾಯಿತು    

ಜಾವಗಲ್: ‘ರೈತ ಉತ್ಪಾದಕರನ್ನು ಸಂಸ್ಕರಣಕಾರನ್ನಾಗಿ ಪರಿವರ್ತಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ದೇಶಾದ್ಯಂತ ಡಿಸೆಂಬರ್ 8 ರಿಂದ 23ರ ವರೆಗೆ ‘ಅನ್ನದಾತ ಮಹೋತ್ಸವ ಹಾಗೂ ಕಿಸಾನ್ ದಿವಸ್’  ಆಯೋಜಿಸುತ್ತಿದ್ದು, ಕೃಷಿ ಚಟುವಟಿಕೆಗೆ ದೊರೆಯುವ ಸಾಲ, ಸೌಲಭ್ಯಗಳ ಮಾಹಿತಿಯನ್ನು ರೈತರು ಪಡೆದುಕೊಳ್ಳಬಹುದು’ ಎಂದು ಜಾವಗಲ್  ಶಾಖೆಯ ವ್ಯವಸ್ಥಾಪಕ ಬಿ.ಎಚ್. ಜ್ಞಾನೇಶ್ ತಿಳಿಸಿದರು.

ಎಸ್‌ಬಿಐ ಜಾವಗಲ್ ಶಾಖೆ ಆವರಣದಲ್ಲಿ ಶುಕ್ರವಾರ ಆಯೋಜಿದ್ದ ಕಿಸಾನ್ ದಿವಸ್ ಹಾಗೂ ಅನ್ನದಾತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ನೀಡುವ  ಸಾಲವನ್ನು ರೈತರು ದಕ್ಷವಾಗಿ ಬಳಸಿ, ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಉತ್ತಮ ಬೆಲೆಗೆ ಮಾರಾಟ ಮಾಡಬೇಕು. ಲಾಭಾಂಶವನ್ನು ಹೆಚ್ಚಿಸಿಕೊಳ್ಳಬೇಕು. ಬೆಳೆ ಸಂಸ್ಕರಣ ಘಟಕ, ಆಹಾರೋದ್ಯಮ ಸ್ಥಾಪನೆಗೆ, ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮ ಸ್ಥಾಪಿಸಲು ಸಾಲ ಒದಗಿಸುತ್ತಿದೆ. ರೈತರು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

 ಶಾಖೆಯಿಂದ ಪ್ರಗತಿಪರ ರೈತರಾದ ಜವರೇಗೌಡ, ಮಾಲತಿ ಸಂಗಮೇಶ್, ಧನಂಜಯಪುರದ ರೈತ ಡಿ.ಪಿ. ಗಿರಿ ಗೌಡ, ತಿಮ್ಮನಹಳ್ಳಿ ಹರೀಶ್ ಹಾಗೂ ಸಂಗಮೇಶ ಎಂಬವರನ್ನು ಸನ್ಮಾನಿಸಲಾಯಿತು.

ADVERTISEMENT

 ಬ್ಯಾಂಕ್‌ ಅಧಿಕಾರಿ ಶೋಭಾ, ಹರೀಶ್, ಸಿಬ್ಬಂದಿ ಜೀವನ್ ರಾಜು, ಬಸವರಾಜ್, ಮೋಹನ್, ಅನಂತ್  ಉಪಸ್ಥಿತರಿದ್ದರು.

‘ಜಿಲ್ಲೆಯಲ್ಲಿ ತೆಂಗಿಗೆ ನೆರವು’

‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಹಾಸನ ಜಿಲ್ಲೆಗೆ ತೆಂಗು ಬೆಳೆಯನ್ನು ಆಯ್ಕೆ ಮಾಡಲಾಗಿದ್ದು ಕೃಷಿಕರು ಪಿಎಂಎಫ್‌ಎಂ ಹಾಗೂ ಕಿಸಾನ್ ಸಮೃದ್ಧಿ ಸೌಲಭ್ಯವನ್ನು ಸದ್ಬಳಕೆ ಮಾಡಿ ತೆಂಗು ಬೆಳೆ ಹಾಗೂ ಉದ್ಯಮಗಳ ಸ್ಥಾಪನೆಗೆ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಬಹುದು’ ಎಂದು ಜ್ಞಾನೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.