ADVERTISEMENT

ಏಡ್ಸ್: ಜಾಗೃತಿಯಿಂದ ಆರೋಗ್ಯ; ನ್ಯಾ. ಬಿ.ಕೆ.ನಾಗೇಶ ಮೂರ್ತಿ

ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ವಿಶ್ವ ಏಡ್ಸ್‌ ಅರಿವು ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 3:11 IST
Last Updated 30 ಡಿಸೆಂಬರ್ 2025, 3:11 IST
ಅರಕಲಗೂಡಿನಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ. ನಾಗೇಶ ಮೂರ್ತಿ ಉದ್ಘಾಟಿಸಿದರು. ಡಾ ಪುಷ್ಪಲತ, ತೌಪೀಕ್ ಅಹಮದ್ ಪರಶುರಾಮ್ ಶಿರೂರ್ ಭಾಗವಹಿಸಿದ್ದರು.
ಅರಕಲಗೂಡಿನಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ. ನಾಗೇಶ ಮೂರ್ತಿ ಉದ್ಘಾಟಿಸಿದರು. ಡಾ ಪುಷ್ಪಲತ, ತೌಪೀಕ್ ಅಹಮದ್ ಪರಶುರಾಮ್ ಶಿರೂರ್ ಭಾಗವಹಿಸಿದ್ದರು.   

ಅರಕಲಗೂಡು: ‘ಏಡ್ಸ್ ಹರಡುವ ವಿಧಾನ ಕುರಿತು ಅರಿವು ಮೂಡಿಸಿಕೊಂಡು ಜಾಗೃತಿ ವಹಿಸಿದರೆ ಈ ರೋಗದಿಂದ ದೂರವಿರಬಹುದು’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ. ಕೆ. ನಾಗೇಶ ಮೂರ್ತಿ ತಿಳಿಸಿದರು.

ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ರೋಟರಿ ಕ್ಲಬ್ ಹಾಗೂ ಇತರೆ ಇಲಾಖೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಏಡ್ಸ್‌ ಅರಿವು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ವೈಯುಕ್ತಿಕ ತಪ್ಪುಗಳಿಂದಾಗಿ ಈ ಕಾಯಿಲೆಗೆ ತುತ್ತಾಗದಂತೆ ಜಾಗೃತಿ ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದರು.

ADVERTISEMENT

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಏಡ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುತ್ತಿದ್ದಾರೆ. ಯುವ ಜನತೆ ಸೆಳೆತಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳದಂತೆ ಕಿವಿ ಮಾತು ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಆಪ್ತಸಮಾಲೋಚಕ ಪರಶುರಾಮ್ ಶಿರೂರ್ ದೇಶದಲ್ಲಿ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದು ರಾಜ್ಯದಲ್ಲಿ ಜಿಲ್ಲೆ 13ನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ತಾಲ್ಲೂಕು ಐದನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 13,293 ಜನ ಸೋಂಕಿತರಿದ್ದು 9,876 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 239 ಮಕ್ಕಳಲ್ಲಿ ಸೋಂಕನ್ನು ಪತ್ತೆಹಚ್ಚಲಾಗಿದೆ. 2002 ರಿಂದ 2025ವರೆಗೆ ತಾಲ್ಲೂಕಿನಲ್ಲಿ 913 ಸೋಂಕಿತ ಖಚಿತ ಪ್ರಕರಣಗಳನ್ನುಪತ್ತೆ ಹಚ್ಚಲಾಗಿದೆ ಎಂದರು.

ಡೊಳ್ಳು ಕುಣಿತ, ತೊಗಲಗೊಂಬೆ ಆಟ, ಶಾಲೆ, ಕಾಲೇಜುಗಳಲ್ಲಿ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ, ರೆಡ್ ರಿಬ್ಬನ್ ಕ್ಲಬ್‌ಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಂಡಿದ್ದು ಹೈ ರಿಸ್ಕ್ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಉಚಿತ ತಪಾಸಣಾ ಶಿಬಿರಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞರು, ಎನ್‌ಸಿಡಿ ವಿಭಾಗದ ವೈದ್ಯರು ಹಾಗೂ ಸಿಬ್ಬಂದಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಕಾರ್ಯಕರ್ತರನ್ನು ಗೌರವಿಸಲಾಯಿತು. ಏಡ್ಸ್ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಗಿರೀಶ್, ರೋಟರಿ ಮಾಜಿ ಅಧ್ಯಕ್ಷ ಗಂಗಾಧರ್, ತರಬೇತಿ ಸಂಸ್ಥೆ ಪ್ರಾಚಾರ್ಯ ತೌಫಿಕ್ ಅಹಮದ್, ತರಬೇತಿ ಅಧಿಕಾರಿಗಳಾದ ಎ. ಎಸ್. ಯೋಗನಾಥ್, ದೇವರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳ, ಎನ್‌ಸಿಡಿ ವಿಭಾಗದ ಡಾ.ಪ್ರೀತಮ್, ಶುಶ್ರೂಷಕರಾದ ಲಲಿತ, ಉಮೇಶ್, ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞೆ ಗೌರಮ್ಮ, ಪ್ರಕಾಶ್, ರತ್ನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.