ADVERTISEMENT

ಆಲೂರು| ಹೆಸರಿಗಷ್ಟೇ ನಿಲ್ದಾಣ, ನಿಲ್ಲದ ರೈಲು: ಬಸ್‌ನಲ್ಲಿ ದುಬಾರಿ ಪ್ರಯಾಣ

ಎಂ.ಪಿ.ಹರೀಶ್
Published 20 ಫೆಬ್ರುವರಿ 2026, 6:33 IST
Last Updated 20 ಫೆಬ್ರುವರಿ 2026, 6:33 IST
<div class="paragraphs"><p>ಬೆಂಗಳೂರಿನಿಂದ ಹೊರಡುವ ಡೆಮೋ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಯಿತು.</p></div>

ಬೆಂಗಳೂರಿನಿಂದ ಹೊರಡುವ ಡೆಮೋ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಯಿತು.

   

ಆಲೂರು: ಕೃಷಿಯನ್ನೇ ನಂಬಿರುವ ಜಿಲ್ಲೆಯ ಅತ್ಯಂತ ಚಿಕ್ಕದಾದ ತಾಲ್ಲೂಕು ಆಲೂರು. ಕಾಫಿ ಬೆಳೆಗಾರರೇ ಹೆಚ್ಚಾಗಿರುವ ತಾಲ್ಲೂಕಿನ ಆರ್ಥಿಕ ಚಟುವಟಿಕೆಗೆ ಅಗತ್ಯ ಸೌಕರ್ಯಗಳಿಲ್ಲದೇ ನಲುಗುವಂತಾಗಿದೆ. ಅದರಲ್ಲಿ ಪ್ರಮುಖವಾಗಿ ರೈಲುಗಳ ನಿಲುಗಡೆ ಕಲ್ಪಿಸದೇ ಇರುವುದು ರೈತಾಪಿ ಜನರು ಹಾಗೂ ಸಾರ್ವಜನಿಕರಿಗೆ ಇನ್ನಿಲ್ಲದ ಹೊರೆಯಾಗಿ ಪರಿಣಮಿಸಿದೆ.

ತಾಲ್ಲೂಕು ಕೇಂದ್ರದಲ್ಲಿ ಸುಮಾರು ಆರು ದಶಕಗಳಿಂದ ರೈಲು ಸಂಚಾರ ಇತ್ತು. 1996ರಲ್ಲಿ ಮೀಟರ್‌ ಗೇಜ್‌ನಿಂದ ಬ್ರಾಡ್‍ಗೇಜ್‍ಗೆ ಪರಿವರ್ತನೆಯಾಗಿದ್ದು, ನಂತರ ಯಾವುದೇ ರೈಲು ತಾಲ್ಲೂಕು ಕೇಂದ್ರದಲ್ಲಿ ನಿಲುಗಡೆ ಆಗುತ್ತಿಲ್ಲ.

ADVERTISEMENT

ಸಕಲೇಶಪುರ ಮತ್ತು ಆಲೂರು ತಾಲ್ಲೂಕಿನ ರೈತರು ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ, ಭತ್ತ, ರಾಗಿ, ಮುಸುಕಿನ ಜೋಳ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ತರಕಾರಿ ಬೆಳೆಯುತ್ತಾರೆ. ಸ್ಥಳೀಯವಾಗಿ ಹಾಸನ ಮಾರುಕಟ್ಟೆ ಹೊರತುಪಡಿಸಿದರೆ, ಬೇರೆ ಯಾವುದೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಯಲ್ಲಿ ಕೇಳಿದಷ್ಟು ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಕುಗ್ಗಿದ್ದಾರೆ.

ಬಾಳ್ಳುಪೇಟೆ ಸೇರಿದಂತೆ ಎರಡು ತಾಲ್ಲೂಕಿನ ಸುತ್ತಲಿನ ಸುಮಾರು 400ಕ್ಕೂ ಹೆಚ್ಚು ಗ್ರಾಮಗಳ ಜನರು, ನಿತ್ಯ ಬಸ್‌ನಲ್ಲಿ ಬೆಂಗಳೂರಿಗೆ ಸಂಚರಿಸುತ್ತಾರೆ. ರೈಲಿನಲ್ಲಿ ಸಂಚರಿಸಬೇಕಾದರೆ ಹಾಸನ ರೈಲು ನಿಲ್ದಾಣಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಒಂದೆಡೆ ಕೃಷಿ ಉತ್ಪನ್ನಗಳನ್ನು ರಾಜ್ಯ ರಾಜಧಾನಿಗೆ ಸಾಗಿಸಲು ಕಷ್ಟವಾಗುತ್ತಿದೆ. ಇನ್ನೊಂದೆಡೆ ಜನರು ದುಬಾರಿ ಹಣ ಕೊಟ್ಟು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬೆಂಗಳೂರಿಗೆ ತೆರಳುವಂತಾಗಿದೆ. ಕನಿಷ್ಠ ಆಲೂರಿನಲ್ಲಿ ಕೆಲವು ರೈಲುಗಳ ನಿಲುಗಡೆ ಮಾಡಿದಲ್ಲಿ, ಆರ್ಥಿಕ ಹೊರೆ ಕಡಿಮೆಯಾಗಲಿದೆ ಎನ್ನುತ್ತಾರೆ ತಾಲ್ಲೂಕಿನ ಜನರು.

ನಮ್ಮದು ಅತ್ಯಂತ ಹಳೆಯ ತಾಲ್ಲೂಕು. ಆದರೆ, ಸೌಕರ್ಯಗಳ ವಿಷಯ ಬಂದಾಗ ಅತ್ಯಂತ ಹಿಂದುಳಿದ ತಾಲ್ಲೂಕಾಗಿ ಪರಿಣಮಿಸಿದೆ. ಸುಸಜ್ಜಿತವಾದ ರೈಲು ನಿಲ್ದಾಣವಿದೆ. ಅಲ್ಲದೇ ರಾಜ್ಯದ ರಾಜಧಾನಿ, ಕರಾವಳಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗವೂ ಇದೆ. ನಿತ್ಯ ಹತ್ತಾರು ರೈಲುಗಳು ಆಲೂರಿನ ಮೂಲಕ ಹಾದು ಹೋಗುತ್ತವೆ. ಅದರಲ್ಲಿ ಕೆಲವು ರೈಲುಗಳಿಗಾದರೂ ಇಲ್ಲಿ ನಿಲುಗಡೆ ಕಲ್ಪಿಸಿದಲ್ಲಿ ಅನುಕೂಲ ಆಗಲಿದೆ. ಆದರೆ, ಈ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇವಲ ಮನವಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುವ ಬೇಸರ ಜನರದ್ದಾಗಿದೆ.

2024 ರಲ್ಲಿ ಸ್ಥಳೀಯ ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತಕುಮಾರ್ ಅವರು, ರೈಲ್ವೆ ಸಚಿವರು, ಆಗಿನ ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿಮೆಂಟ್ ಮಂಜು, ಹುಲ್ಲಳ್ಳಿ ಸುರೇಶ್ ಮತ್ತು ಅಧಿಕಾರಿಗಳ ಸಹಕಾರದಿಂದ ಬೆಂಗಳೂರಿನಿಂದ ಆಲೂರು ಮಾರ್ಗವಾಗಿ ಸಂಚರಿಸುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಅಧಿಕೃತ ಆದೇಶ ಆಗಿತ್ತು. ಆರು ತಿಂಗಳು ಈ ರೈಲು ನಿಲುಗಡೆ ಆಗುತ್ತಿಲ್ಲ. ನಂತರ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ, ಅರ್ಥಿಕ ನಷ್ಟವಾಗುತ್ತದೆ ಎಂಬ ಕಾರಣದಿಂದ ರೈಲು ನಿಲುಗಡೆ ಆಗುತ್ತಿಲ್ಲ.

ಡೆಮೋ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ 15 ಸಾವಿರ ಜನರ ಸಹಿ ಸಂಗ್ರಹ ಮಾಡಿ ರೈಲ್ವೆ ಸಚಿವರು ಸಂಸದರು ಶಾಸಕರಿಗೆ ಮನವಿ ಸಲ್ಲಿಸುತ್ತಿದ್ದೇನೆ. ಸಕಲೇಶಪುರದವರೆಗೆ ರೈಲು ವಿಸ್ತರಿಸಿದರೆ 2 ತಾಲ್ಲೂಕಿನ ಜನರಿಗೆ ಅನುಕೂಲ ಆಗಲಿದೆ.
ಹೇಮಂತಕುಮಾರ್ ರಾಧಮ್ಮ ಜನಸ್ಪಂದನೆ ವೇದಿಕೆ ಅಧ್ಯಕ್ಷ
ಬೆಂಗಳೂರಿನಿಂದ ಹಾಸನಕ್ಕೆ ಹೊರಡುವ ಡೆಮೋ ರೈಲು ಸಂಚಾರವನ್ನು ಸಕಲೇಶಪುರದವರೆಗೆ ವಿಸ್ತರಿಸಲು ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಮನವಿ ಮಾಡುತ್ತೇನೆ. ರೈಲು ನಿಲುಗಡೆಗೆ ಶ್ರಮಿಸುತ್ತೇನೆ.
ಶ್ರೇಯಸ್ ಪಟೇಲ್ ಸಂಸದ
ಸುರಕ್ಷಿತ ಹಾಗು ಕಡಿಮೆ ವೆಚ್ಚ ಸಂಚಾರಕ್ಕೆ ಅನುಕೂಲವಾಗುವ ಏಕೈಕ ಮಾರ್ಗ ರೈಲು. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಸಂಪರ್ಕಿಸಿ ಡೆಮೊ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಲು ಮನವಿ ಮಾಡುತ್ತೇನೆ.
ಸಿಮೆಂಟ್ ಮಂಜು ಶಾಸಕ

ಡೆಮೊ ರೈಲು ವಿಸ್ತರಣೆಗೆ ಆಗ್ರಹ

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್) ರೈಲು ನಿಲ್ದಾಣದಿಂದ ಡೆಮೋ ರೈಲು ನಿತ್ಯ ಬೆಳಿಗ್ಗೆ 9.57ಕ್ಕೆ ಹೊರಡುತ್ತಿದ್ದು ಮಧ್ಯಾಹ್ನ 1.55 ಕ್ಕೆ ಹಾಸನ ತಲುಪಲಿದೆ. 2.10 ಕ್ಕೆ ಹಾಸನದಿಂದ ಹೊರಟು ಸಂಜೆ 5.10 ಕ್ಕೆ ಮೆಜೆಸ್ಟಿಕ್ ತಲುಪುತ್ತದೆ. ಈ ರೈಲು ಸಂಚರಿಸುವ ಮಾರ್ಗದಲ್ಲಿರುವ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಈ ರೈಲನ್ನಾದರೂ ಸಕಲೇಶಪುರದವರೆಗೆ ವಿಸ್ತರಿಸಿದರೆ ಆಲೂರು ಬಾಳ್ಳುಪೇಟೆ ಸಕಲೇಶಪುರದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಈ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಬೇಕು ಎಂದು ತಾಲ್ಲೂಕಿನ ಸುಮಾರು 500 ಕ್ಕೂ ಹೆಚ್ಚು ಹಳ್ಳಿಗಳ ಜನರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.