ADVERTISEMENT

ಆಲೂರು| ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ: ಮಲ್ಲಿಕಾರ್ಜುನ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:28 IST
Last Updated 26 ಜನವರಿ 2026, 6:28 IST
ಆಲೂರಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಹಶೀಲ್ದಾರ್‌ ಎಚ್.ಮಲ್ಲಿಕಾರ್ಜುನ್‌ ಉದ್ಘಾಟಿಸಿದರು.
ಆಲೂರಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಹಶೀಲ್ದಾರ್‌ ಎಚ್.ಮಲ್ಲಿಕಾರ್ಜುನ್‌ ಉದ್ಘಾಟಿಸಿದರು.   

ಆಲೂರು: ಯಾವುದೇ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆಯ ಸಮಯಗಳಲ್ಲಿ ನೀಡುವ ಆಸೆ, ಆಮಿಷಗಳಿಗೆ ಒಳಗಾಗದೇ ಸ್ವತಂತ್ರವಾಗಿ, ನಿರ್ಭೀತಿಯಿಂದ ಮತದಾನ ಮಾಡುವ ಮೂಲಕ ದೇಶವನ್ನು ಮುನ್ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ತಹಶೀಲ್ದಾರ್ ಎಚ್.ಮಲ್ಲಿಕಾರ್ಜುನ್ ತಿಳಿಸಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಆಲೂರು ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಯುವ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಗುರಿ. ಪ್ರತಿ ವರ್ಷ ಒಂದು ನಿರ್ದಿಷ್ಟ ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. 18 ವರ್ಷ ತುಂಬಿದ ಯುವಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಪ್ರೋತ್ಸಾಹಿಸಲಾಗುತ್ತದೆ. ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಮತದಾನವು ಕೇವಲ ಒಂದು ಹಕ್ಕಲ್ಲ. ಅದೊಂದು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ರೋಹಿತ್ ಕುಮಾರ್ ಮಾತನಾಡಿ, ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮತದಾನದ ಅಧಿಕಾರ ನೀಡಿದೆ. ಭಾರತೀಯ ಚುನಾವಣಾ ಆಯೋಗವು ಸ್ಥಾಪನೆಯಾದ ದಿನದ ನೆನಪಿಗಾಗಿ 2011ರಿಂದ ಈ ದಿನ ಆಚರಿಸಲಾಗುತ್ತಿದೆ. ಈ ದಿನದ ಮುಖ್ಯ ಉದ್ದೇಶವೆಂದರೆ ಯುವಜನತೆಯನ್ನು ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಾಲ್ಲೂಕಿನಲ್ಲಿ ಉತ್ತಮ ಚುನಾವಣಾ ಕಾರ್ಯಕ್ಷಮತೆ ತೋರಿದ ಬಿಎಲ್‌ಒ, ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್, ಕಾಲೇಜು ಪ್ರಾಂಶುಪಾಲ ಸತ್ಯಸಾಯಿ ಪ್ರಸಾದ್, ಕೌಸರ್ ಅಹಮ್ಮದ್, ಎಇಇ ರವಿಕುಮಾರ್, ಉಪ ತಹಶೀಲ್ದಾರ್ ಅಂಕೇಗೌಡ, ರಮೇಶ್, ರಾಜಸ್ವ ನಿರೀಕ್ಷಕ ಗೋವಿಂದರಾಜು, ಚುನಾವಣೆ ಶಾಖೆ ಶಿರಸ್ತೇದಾರ್ ರವಿ, ಸಿಬ್ಬಂದಿ ಶಿವಾನಂದ್, ಪನಘ, ಸರಸ್ವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.